2,500 ರೂ. ನೀಡಿದರೆ ಕೊರೋನದ ನೆಗೆಟಿವ್ ವರದಿ !

Update: 2020-07-06 12:05 GMT

ಮೀರತ್: ಎರಡೂವರೆ ಸಾವಿರ ರೂಪಾಯಿ ನೀಡಿದರೆ ಕೋವಿಡ್-19 ನೆಗೆಟಿವ್ ವರದಿ ನೀಡುತ್ತಿದೆಯೆನ್ನಲಾದ ಮೀರತ್ ನಗರದ ಖಾಸಗಿ ಆಸ್ಪತ್ರೆಯೊಂದನ್ನು ಅಧಿಕಾರಿಗಳು ಸೀಲ್ ಮಾಡಿ ಅದರ ಪರವಾನಿಗೆ ರದ್ದುಗೊಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯೊಬ್ಬರು  ಹಣಕ್ಕೆ ಬದಲಾಗಿ ಕೆಲವರಿಗೆ ನಕಲಿ ಕೋವಿಡ್ ವರದಿ ನೀಡುತ್ತಿರುವ ವೀಡಿಯೋ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಢಿಂಗ್ರಾ ಹೇಳಿದ್ದಾರೆ. ರೂ 2,500 ಪಾವತಿಸಿದರೆ ಕೋವಿಡ್-19 ನೆಗೆಟಿವ್ ವರದಿ ನೀಡುವುದಾಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ಈ ವ್ಯಕ್ತಿಯನ್ನು ಗುರುತಿಸಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಮೀರತ್‍ನ ಮುಖ್ಯ ವೈದ್ಯಾಧಿಕಾರಿ ಡಾ. ರಾಜಕುಮಾರ್ ಹೇಳಿದ್ದಾರೆ.

ಕೆಲ ಮಂದಿ ರೂ 2,000 ನೀಡಿ ಬಾಕಿ ರೂ 500 ಪಾವತಿಸುವುದಾಗಿ ಹೇಳುತ್ತಿರುವುದೂ ವೀಡಿಯೋದಲ್ಲಿ ಕಾಣಿಸುತ್ತದೆ. ಆಸ್ಪತ್ರೆಯ ಮ್ಯಾನೇಜರ್ ಹಣಕ್ಕಾಗಿ ನಕಲಿ ಕೋವಿಡ್ ವರದಿ ನೀಡುವ ಭರವಸೆ ನೀಡಿದವನೆಂದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

ಮೀರತ್ ನಗರದಲ್ಲಿ ಇಲ್ಲಿಯ ತನಕ 1,117 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ಒಟ್ಟು 69 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News