ಮಸಗಲಿ ಅರಣ್ಯ ಭೂಮಿ ಒತ್ತುವರಿದಾರರಿಗೆ ಪರಿಹಾರ ನೀಡದೇ ಒಕ್ಕಲೆಬ್ಬಿಸಬಾರದು: ಸಂತ್ರಸ್ತರಿಂದ ಡಿಸಿಗೆ ಮನವಿ

Update: 2020-07-06 12:59 GMT

ಚಿಕ್ಕಮಗಳೂರು, ಜು.6: ಮಸಗಲಿ ಅರಣ್ಯ ಭೂಮಿ ಒತ್ತುವರಿದಾರರಿಗೆ ಸೂಕ್ತ ಪುನರ್ವಸತಿಯೊಂದಿಗೆ ಪರಿಹಾರದ ಪ್ಯಾಕೇಜ್ ನೀಡಬೇಕು ಹಾಗೂ ಸಂತ್ರಸ್ತರಿಗೆ ಕೃಷಿ ಭೂಮಿಯನ್ನೂ ಒದಗಿಸಬೇಕು. ಸೂಕ್ತ ಪುನರ್ವಸತಿ ಕಲ್ಪಿಸದೇ ಒತ್ತುವರಿದಾರರನ್ನು ಅಲ್ಲಿಂದ ತೆರವು ಮಾಡಬಾರದೆಂದು ಒತ್ತಾಯಿಸಿ ಮಸಗಲಿ ಅರಣ್ಯಭೂಮಿ ಒತ್ತುವರಿದಾರರು ವಿವಿಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದರು. 

ಮನವಿ ಸಲ್ಲಿಸಿದ ಬಳಿಕ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಸಗಲಿ, ತಾಲೂಕಿನ ಮಸಗಲಿ ಗ್ರಾಮದ ತೋಟದಮಕ್ಕಿ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡುವ ಕಾರ್ಯಚರಣೆ ನಡೆಸಿದ್ದು, ತೆರವು ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಂತ್ರಸ್ತರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದ ಅವರು, ಇಲ್ಲಿನ ಸಣ್ಣ ರೈತರು ಅನೇಕ ವರ್ಷಗಳಿಂದ ತಮ್ಮ ಮಕ್ಕಳಂತೆ ಬೆಳೆಸಿದ್ದ ಕಾಫಿ ಗಿಡಗಳನ್ನು ಇಲಾಖೆ ಸಿಬ್ಬಂದಿ ಕಡಿದು ನಾಶಪಡಿಸಿದ್ದಾರೆ. ಎರಡು ಮೂರು ತಿಂಗಳು ಅವಕಾಶ ನೀಡಿದ್ದರೇ ಕಾಫಿ ಗಿಡಗಳಲ್ಲಿದ್ದ ಫಸಲನ್ನು ಕಟಾವು ಮಾಡಿಕೊಳ್ಳುತ್ತಿದ್ದರು. ಇದನ್ನು ಅರಣ್ಯಾಧಿಕಾರಿಗಳಿಗೆ ಮನವಿರಿಕೆ ಮಾಡಿದರೂ ಇಲಾಖೆಯ ಆತುರದ ನಿರ್ಧಾರದಿಂದ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದರು. 

ಇಲ್ಲಿನ ರೈತರಿಗೆ ಆಗಿರುವ ನಷ್ಟವನ್ನು ಸರಕಾರ ಕೂಡಲೇ ತುಂಬಿಕೊಡಬೇಕು. ನಿರಾಶ್ರಿತರಿಗೆ ಸರಕಾರ ಘೋಷಿಸಿರುವ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು. ಅವರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸದ ಬಳಿಕವೇ ಸಂತ್ರಸ್ತರನ್ನು ಒಕ್ಕಲ್ಲೆಬ್ಬಿಸಬೇಕು. ಬಾಕಿ ಒತ್ತುವರಿ ತೆರವು ಸಂದರ್ಭ ಅಲ್ಲಿನ ರೈತರು ಫಸಲು ಕೊಯ್ಲು ನಡೆಸುವವರೆಗೂ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮಸಗಲಿ ಅರಣ್ಯ ಭೂಮಿ ಒತ್ತುವರಿದಾರರಿಗೆ ಒಂದು ವರ್ಷದೊಳಗೆ ರಾಜ್ಯ ಸರಕಾರ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಹೇಳಿತ್ತು. ಭೂ ರಹಿತರಿಗೆ ಐದು ಲಕ್ಷ ರೂ. ಪರಿಹಾರ ಹಾಗೂ ಮನೆ ಇಲ್ಲದವರಿಗೆ ನಾಲ್ಕು ಗುಂಟೆ ಜಾಗ ಮತ್ತು ಮನೆ ಕಟ್ಟಿಸಿಕೊಡುವುದಾಗಿ ಹೇಳಿದೆ. 211 ಸಂತ್ರಸ್ತ ಕುಟುಂಬಗಳ ಪೈಕಿ 36 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಮನೆ ಇಲ್ಲದವರಿಗೆ ಪರಿಹಾರ ನೀಡಿಲ್ಲ, ಬದಲಿ ಜಾಗವನ್ನೂ ನೀಡಿಲ್ಲ ಎಂದು ಆರೋಪಿಸಿದ ಅವರು, ಸಂತ್ರಸ್ತರು ಇನ್ನೂ ಪರಿಹಾರ ಪಡೆದುಕೊಂಡಿಲ್ಲ, ಅವರಿಗೆ ಸರಕಾರ ಪರಿಹಾರ ನೀಡುವರೆಗೂ ಒಕ್ಕಲ್ಲೆಬ್ಬಿಸಬಾರದು. ಸದ್ಯ ರೈತರ ಕಾಫಿ ಫಸಲಿಗೆ ಬಂದಿದ್ದು, ಕಾಫಿ ಕಟಾವು ಮಾಡಿಕೊಳ್ಳುವರೆಗೂ ಕಾಲಾವಕಾಶ ನೀಡಬೇಕು. ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕೆಂದು ತಿಳಿಸಿದರು. 

ಮಸಗಲಿ ಅರಣ್ಯ ಭೂಮಿ ಒತ್ತುವರಿ ಸಂತ್ರಸ್ತರು ಮಾತನಾಡಿ, ಮಸಗಲಿ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದ 211 ಕುಟುಂಬಗಳನ್ನು ನಿರಾಶ್ರಿತರೆಂದು ಪರಿಗಣಿಸಿ ಆ ಎಲ್ಲಾ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ಕಲ್ಪಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ರಾಜ್ಯ ಸರಕಾರ ಒಂದು ವರ್ಷದೊಳಗೆ ಎಲ್ಲರಿಗೂ ಪುನರ್ವಸತಿ ಕಲ್ಪಿಸುವುದಾಗಿ ಸುಪ್ರೀಕೋರ್ಟ್ ಗೆ ತಿಳಿಸಿತ್ತು. ಪ್ಯಾಕೇಜ್‍ನಲ್ಲಿ ಭೂರಹಿತರಿಗೆ ಐದು ಲಕ್ಷ ಪರಿಹಾರ ಹಾಗೂ ಮನೆ ಇಲ್ಲದವರಿಗೆ ನಾಲ್ಕು ಗುಂಟೆ ಜಾಗ ಮತ್ತು ಮನೆ ಕಟ್ಟಿಸಿಕೊಡುವುದಾಗಿ ನ್ಯಾಯಾಲಯಕ್ಕೆ ಸರಕಾರ ವರದಿ ಸಲ್ಲಿಸಿದೆ. ಆದರೆ, 211 ಕುಟುಂಬಗಳ ಪೈಕಿ 36 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಿದ್ದು, ಉಳಿದವರಿಗೆ ಪರಿಹಾರ ನೀಡಿಲ್ಲ ಅಳಲು ತೋಡಿಕೊಂಡರು.

ಸರಕಾರ ಪರಿಹಾರ ಪ್ಯಾಕೇಜ್‍ನಲ್ಲೂ ತಾರತಮ್ಯ ಧೋರಣೆ ಅನುಸರಿಸಿದೆ. ಭೂಮಿ ಕಳೆದುಕೊಂಡವರಿಗೆ ಮತ್ತು ಮನೆ ಕಳೆದುಕೊಂಡವರಿಗೂ ಸಮಾನ ರೀತಿಯ ಪರಿಹಾರ ನೀಡಲು ಮುಂದಾಗಿದೆ. ಈ ತಾರತಮ್ಯ ಧೋರಣೆಯನ್ನು ಸರಿಪಡಿಸಬೇಕು. ಸರಕಾರ ನಮಗೆ ಸಂಪೂರ್ಣ ಪರಿಹಾರ ನೀಡಿ, ಮನೆ ನಿರ್ಮಾಣ ಮಾಡಿಕೊಟ್ಟ ನಂತರವೇ ಒಕ್ಕಲ್ಲೆಬ್ಬಿಸಬೇಕು. ಅರಣ್ಯ ಇಲಾಖೆ ಫಸಲು ನೀಡುತ್ತಿರುವ ಕಾಫಿಗಿಡಗಳನ್ನು ನಾಶಪಡಿಸದೇ ಫಸಲು ಕಟಾವು ಮಾಡುವವರೆಗೂ ಅವಕಾಶ ನೀಡಬೇಕೆಂದು ಸಂತ್ರಸ್ತರು ಇದೇ ವೇಳೆ ಆಗ್ರಹಿಸಿದರು. 

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಮಸಗಲಿ ಅರಣ್ಯ ಭೂಮಿ ಒತ್ತುವರಿದಾರರ ತೆರವು ಪ್ರಕರಣ ಕುರಿತು ಸರಕಾರದ ಮಟ್ಟದಲ್ಲಿ ಸುಧೀರ್ಘ ಚರ್ಚೆಯಾಗಿದೆ. ನಿರಾಶ್ರಿತರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಪರಿಹಾರ ಪ್ರಮಾಣ ಹೆಚ್ಚಿಸಬೇಕು. ಪರಿಹಾರದ ಪ್ಯಾಕೇಜ್‍ನಲ್ಲಿ ಅನರ್ಹರಿಗೂ ಪ್ಯಾಕೇಜ್‍ನಲ್ಲಿ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ, ಅದನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದರು.

ನಿರಾಶ್ರಿತರ ಸಮಸ್ಯೆಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕೆಂಬ ಬೇಡಿಕೆ ಇದ್ದು, ನ್ಯಾಯಾಲಯದ ಗಮನಕ್ಕೆ ತರಲಾಗುವುದು. ನಿರಾಶ್ರಿತರಿಗೆ ಬದಲಿ ಭೂಮಿ ನೀಡುವ ಬಗ್ಗೆ ಸರಕಾರ ಚಿಂತಿಸಿದೆ. ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಳಂಭವಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಹೊಲದಗದ್ದೆ ಗಿರೀಶ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಶಿವಾನಂದಸ್ವಾಮಿ, ಕಾಫಿ ಬೆಳೆಗಾರ ಡಿ.ಎಂ.ವಿಜಯ್, ನಿರಾಶ್ರಿತರಾದ ಎಂಬ್ರಳ್ಳಿ ಗ್ರಾಮದ ರಾಜುಪೂಜಾರಿ, ಬಾಬು ಪೂಜಾರಿ, ಮುದ್ದು ಪೂಜಾರಿ, ರಮೇಶ್, ವಸಂತಿ, ಪಾರ್ವತಿ, ಶ್ರೀಧರ್, ಮಸಗಲಿ ಗ್ರಾಮಸ್ಥರಾದ ಕೃಷ್ಣಕುಮಾರ್, ವಿಜಯ್, ಪವಿತ್ರ, ನಂದೀಶ್ ಉಪಸ್ಥಿತರಿದ್ದರು.

ಮಸಗಲಿ ನಿರಾಶ್ರಿತರಿಗೆ ಮನೆಕಟ್ಟಿಕೊಡಲು ಇಂದಾವರದಲ್ಲಿ ನಿವೇಶನ ಸಿದ್ಧಪಡಿಸಲಾಗಿದೆ. ಮನೆ ನಿರ್ಮಾಣಕ್ಕೆ ರಾಜೀವ್‍ ಗಾಂಧಿ ಗೃಹ ನಿರ್ಮಾಣ ಮಂಡಳಿಗೂ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆದು ಮನೆ ನಿರ್ಮಾಣವಾಗಲಿದೆ. ನ್ಯಾಯಾಲಯದ ಆದೇಶದ ಪ್ರಕಾರ ಕ್ರಮಕೈಗೊಳ್ಳಲಾಗಿದೆ. ರೈತರು ಫಸಲು ಕೊಯ್ದುಕೊಳ್ಳಲು ಡಿಸೆಂಬರ್ ತಿಂಗಳವರೆಗೂ ಕಾಲಾವಕಾಶ ನೀಡಬೇಕೆಂಬ ಬೇಡಿಕೆ ಇದೆ. ಸರಕಾರದ ಗಮನಕ್ಕೆ ತಂದು ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಮಸಗಲಿ ಅರಣ್ಯ ಭೂಮಿ ಒತ್ತುವರಿದಾರರ ಪೈಕಿ ಸುಮಾರು 36 ಕುಟುಂಬಗಳನ್ನು ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆ ಕಳೆದ ಶುಕ್ರವಾರ ತೆರವು ಮಾಡಿತ್ತು. ಈ ವೇಳೆ ಫಸಲಿಗೆ ಬಂದ ಕಾಫಿಗಿಡಗಳನ್ನು ಅರಣ್ಯ ಇಲಾಖಾಧಿಕಾರಿಗಳು ಕಡಿದು ಹಾಕಿದ್ದರು. ಸೋಮವಾರ ಡಿಸಿ ಕಚೇರಿ ಎದುರು ಇಲಾಖಾಧಿಕಾರಿಗಳು ಕಡಿದು ಹಾಕಿದ ಕಾಫಿ ಗಿಡಗಳನ್ನು ವಾಹನಗಳಲ್ಲಿ ಡಿಸಿ ಕಚೇರಿ ಎದುರಿಗೆ ತಂದಿದ್ದ ಸಂತ್ರಸ್ತರು ಧರಣಿ ನಡೆಸಲೂ ಮುಂದಾಗಿದ್ದರು. ಧರಣಿಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಸಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಮುಂದಿಟ್ಟಿದ್ದರು. ನಂತರ ಅರಣ್ಯ ಇಲಾಖಾಧಿಕಾರಿ ಕಚೇರಿಗೆ ತೆರಳಿದ ಸಂತ್ರಸ್ತರು ತಮ್ಮ ಮನವಿ ಸಲ್ಲಿಸಿ ವಾಹನಗಳಲ್ಲಿ ತಂದಿದ್ದ ಅರಣ್ಯ ಇಲಾಖೆ ಕಡಿದು ಹಾಕಿದ್ದ ಕಾಫಿ ಗಿಡಗಳನ್ನು ಇಲಾಖೆ ಕಚೇರಿ ಎದುರು ಎಸೆದು ಹಿಂದಿರುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News