ಚೀನಾದ 100 ಸೈನಿಕರು ಮೃತಪಟ್ಟ ‘ವರದಿ’ ಶೇರ್ ಮಾಡಿದ ಬಿಜೆಪಿ ಮುಖಂಡ!

Update: 2020-07-07 06:01 GMT

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸೋಮವಾರ ಸಂದೇಹಾಸ್ಪದ ವರದಿಯೊಂದನ್ನು ಟ್ವೀಟ್ ಮಾಡಿದ್ದಾರೆ. ಜೂನ್ 15ರಂದು ಪೂರ್ವ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಚೀನಾದ 100ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾಗಿ ಈ ವರದಿ ಪ್ರತಿಪಾದಿಸಿದೆ.

ಈ ವರದಿ ಪ್ರಕಟವಾಗುವವರೆಗೆ ಈ ಪೋಸ್ಟನ್ನು 7 ಸಾವಿರ ಮಂದಿ ಮರುಟ್ವೀಟ್ ಮಾಡಿದ್ದು, 19 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಮಿಶ್ರಾ ಈ ವರದಿಯ ಸ್ಕ್ರೀನ್‍ಶಾಟ್ ಕೂಡಾ ಟ್ವೀಟ್ ಮಾಡಿದ್ದಾರೆ.

ಸ್ಕ್ರೀನ್‍ಶಾಟ್‍ನಲ್ಲಿರುವ ವರದಿ ಹೀಗೆ ವಿವರಿಸುತ್ತದೆ: “ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ಕೈಯಲ್ಲಿ 100ಕ್ಕೂ ಅಧಿಕ ಚೀನಿ ಸೈನಿಕರು ಮೃತಪಟ್ಟಿದ್ದಾರೆ. ಆದರೆ ಚೀನಿ ಸರ್ಕಾರ ಉದ್ದೇಶಪೂರ್ವಕವಾಗಿ ಈ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ)ಯ ಮಾಜಿ ಮುಖಂಡರೊಬ್ಬರ ಪುತ್ರ ಯಂಗ್ ಜಿನಾಲಿ ಹೇಳಿದ್ದಾರೆ. ಸೈನಿಕರ ಬಗ್ಗೆ ಹೇಳಿದರೆ, ಚೀನಾದ ಅಧ್ಯಕ್ಷ ಕ್ಸಿ ಜಿಂಗ್‍ಪಿಂಗ್ ಅವರಿಗೆ ಕಷ್ಟ ಹಾಗೂ ಪಕ್ಷದಲ್ಲಿ ದಂಗೆ ಉಂಟಾಗಬಹುದು ಎಂದು ಯಂಗ್ ಪ್ರತಿಪಾದಿಸಿದ್ದಾರೆ.

ಗಲ್ವಾನ್ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಮೃತಪಟ್ಟಿದ್ದರು. ಆದರೆ ಚೀನಿ ಸೇನೆಯಲ್ಲಿ ಆಗಿರುವ ಸಾವು ನೋವಿನ ಬಗ್ಗೆ ಚೀನಾ ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಜೂನ್ 22ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಾನ್ ಅವರನ್ನು ಈ ಬಗ್ಗೆ ಕೇಳಿದಾಗ, “ಸದ್ಯಕ್ಕೆ ನನ್ನ ಬಳಿ ನಿಮಗೆ ನೀಡಲು ಯಾವುದೇ ಮಾಹಿತಿ ಇಲ್ಲ” ಎಂದು ಉತ್ತರಿಸಿದ್ದರು.

ಸತ್ಯಶೋಧ
ಮಿಶ್ರಾ ಶೇರ್ ಮಾಡಿರುವ ವರದಿ ಭಾರತೀಯ ಬ್ಲಾಗಿಂಗ್ ಸೈಟ್ kreately.in ನಲ್ಲಿ ಪ್ರಕಟವಾಗಿದ್ದು, ಇದರಲ್ಲಿ ಯಾರು ಬೇಕಾದರೂ ಸೈನ್ ಅಪ್ ಮಾಡಿ ಏನು ಬೇಕಾದರೂ ಪೋಸ್ಟ್ ಮಾಡಬಹುದು. ಈ ವರದಿಯಲ್ಲಿ ಸಾಕಷ್ಟು ಸ್ಪೆಲ್ಲಿಂಗ್ ದೋಷಗಳು ಮತ್ತು ವಾಸ್ತವಾಂಶದ ದೋಷಗಳಿವೆ.

ಮೊದಲು ಇದರಲ್ಲಿ “ಚೀನಾ ಸೇನೆಯ ಮಾಜಿ ಅಧಿಕಾರಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕ ಜಿಯಾನ್ಲಿ ಯಾಂಗ್ ಒಪ್ಪಿಕೊಂಡಂತೆ ಜೂನ್ 15ರಂದು ರಾತ್ರಿ ಭಾರತ ಹಾಗೂ ಚೀನಿ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ” ಎಂದು ಹೇಳಲಾಗಿದೆ.

ಆದರೆ ವರದಿಯಲ್ಲಿ ಕೆಲವೆಡೆ ಯಾಂಗ್ ಜಿನಾಲಿ ಎಂದು ಹೇಳಿದ್ದರೆ ಮತ್ತೆ ಕೆಲವೆಡೆ ಗಿಯಾನ್ಲಿ ಎಂದು ಹೇಳಲಾಗಿದೆ. ವರದಿಯ ಶೀರ್ಷಿಕೆಯಲ್ಲಿ ಯಾಂಗ್ ಚೀನಾ ಸೇನೆಯ ಅಧಿಕಾರಿ ಎಂದು ಹೇಳಿದ್ದು, ವರದಿಯಲ್ಲಿ ಚೀನಾದ ಮಾಜಿ ಸೇನಾಧಿಕಾರಿ’ ಎಂದು ಹೇಳಿದೆ.

ವರದಿಯ ಆರಂಭದಲ್ಲಿ ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ದ ಮುಖಂಡನ ಮಗ ಎಂದಿದ್ದರೆ, ಮತ್ತೊಂದು ಕಡೆಯಲ್ಲಿ ಮಾಜಿ ಸಿಪಿಸಿ ಮುಖಂಡರ ಪುತ್ರ ಎಂದು ಹೇಳಿದೆ. ವಾಸ್ತವವಾಗಿ ಸರಿಯಾದ ಹೆಸರು ಯಾಂಗ್ ಜಿಯಾನ್ಲಿ ಎಂದಾಗಿದ್ದು, ಯಾಂಗ್ ಜಿನಾಲಿ ಅಥವಾ ಗಿಯಾಗ್ಲಿ ಅಲ್ಲ. ಈತ ಚೀನಾದ ಭಿನ್ನಮತೀಯ ನಾಯಕನಾಗಿದ್ದು, ಮಾಜಿ ಅಥವಾ ಹಾಲಿ ಮಿಲಿಟರಿ ಅಧಿಕಾರಿ ಅಲ್ಲ.

ಜಿಯಾನ್ಲಿ, ಸಿಪಿಸಿಯ ಮಾಜಿ ನಾಯಕ ಮತ್ತು ತಿಯಮ್ನೆನ್ ಚೌಕ ಹೋರಾಟಗಾರನ ಪುತ್ರ. ಸಿಟಿಜನ್ ಪವರ್ ಇನೀಶಿಯೇಟಿವ್ಸ್ ಫಾರ್ ಚೀನಾ ಎಂಬ ಲಾಭರಹಿತ ಸಂಸ್ಥೆಯೊಂದರ ಸಂಸ್ಥಾಪಕ ಹಾಗೂ ಅಧ್ಯಕ್ಷ. ಈಗ ಅಮೆರಿಕದ ನಿವಾಸಿ.

ಕಳೆದ ವಾರ ವಾಷಿಂಗ್ಟನ್ ಪ್ರಕಟವಾದ ಟೈಮ್ಸ್ ನಲ್ಲಿ ಅಭಿಪ್ರಾಯ ಲೇಖನದಲ್ಲಿ, “ಸೇನೆಯಲ್ಲಿ ಸಾವು ನೋವು ಸಂಭವಿಸಿದೆ ಎಂದು ಹೇಳಿಕೊಳ್ಳಲು ಚೀನಾಗೆ ಭಯ ಇದೆ. ಅದರಲ್ಲೂ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಕಳೆದುಕೊಂಡಿದ್ದಾಗಿ ಹೇಳಿದರೆ, ಅದನ್ನು ದೇಶೀಯವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದರು. ಆದರೆ ಚೀನಾ ಸೇನೆಯಲ್ಲಿ ಎಷ್ಟು ಸಾವು ನೋವು ಸಂಭವಿಸಿದೆ ಎಂಬ ಉಲ್ಲೇಖ ಅದರಲ್ಲಿ ಇರಲಿಲ್ಲ.

ಮಿಶ್ರಾ ಅವರ ಜತೆ ಹಲವು ಮಂದಿ ಟ್ವಿಟ್ಟರ್ ಬಳಕೆದಾರರು ಇಂಥದ್ದೇ ವರದಿಯನ್ನು ಶೇರ್ ಮಾಡಿದ್ದು, ಗಲ್ವಾನ್ ಸಂಘರ್ಷದಲ್ಲಿ 100 ಮಂದಿ ಚೀನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News