‘8192’: ದಾಳಿಕೋರರ ಬಗ್ಗೆ ಸುಳಿವು ನೀಡಿ ಕೊನೆಯುಸಿರೆಳೆದ ಪೊಲೀಸ್ ಕಾನ್‍ ಸ್ಟೇಬಲ್

Update: 2020-07-07 07:56 GMT

ಚಂಡೀಗಢ : ಕಳೆದ ವಾರ  ಸೋನಿಪತ್ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರ ಹತ್ಯೆಗೈದ ಆರು ಆರೋಪಿಗಳ  ಪೈಕಿ  ಐವರನ್ನು ಪೊಲೀಸರು ಬಂಧಿಸಲು ಸಫಲರಾಗಿದ್ದಾರೆ.

ಹತ್ಯೆಗೀಡಾದ ಪೊಲೀಸ್ ಸಿಬ್ಬಂದಿ ರವೀಂದರ್ ಸಿಂಗ್ (28) ಕೊನೆಯುಸಿರೆಳೆಯುವ ಮುನ್ನ ಆರೋಪಿಗಳ ಕಾರಿನ ನೋಂದಣಿ ಸಂಖ್ಯೆ (8192) ಯನ್ನು ತಮ್ಮ  ಅಂಗೈಯಲ್ಲಿ ಬರೆದಿದ್ದೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿತ್ತು. ಸಿಂಗ್ ಅವರು ಈ ಕಾರ್ಯ ಮಾಡಿರದೇ ಇರುತ್ತಿದ್ದರೆ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚುವುದು ಹರಸಾಹಸವಾಗುತ್ತಿತ್ತು.

ಸಿಂಗ್ ಅವರ ಮರಣೋತ್ತರ ಪರೀಕ್ಷೆಯ ವೇಳೆ ಅಂಗೈಯಲ್ಲಿ ಬರೆದಿದ್ದ ಸಂಖ್ಯೆ ಗಮನಕ್ಕೆ  ಬಂದು ಸಿಂಗ್ ಹಾಗೂ ವಿಶೇಷ ಪೊಲೀಸ್ ಅಧಿಕಾರಿ, 43 ವರ್ಷದ ಕಪ್ತಾನ್ ಸಿಂಗ್ ಅವರ ಕೊಲೆಗಡುಕರನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಸುಳಿವು ದೊರಕಿತ್ತು.

ರವೀಂದರ್ ಸಿಂಗ್ ಅವರ ಈ ಮಹತ್ತರ ಕಾರ್ಯಕ್ಕೆ ಅವರಿಗೆ ಮರಣೋತ್ತರ ಪೊಲೀಸ್ ಪದಕ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದು ಹರ್ಯಾಣ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ ಹೇಳಿದ್ದಾರೆ.

ರವೀಂದರ್ ಸಿಂಗ್ ಹಾಗೂ ಕಪ್ತಾನ್ ಸಿಂಗ್ ಕಳೆದ ಮಂಗಳವಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬುಟಾನ ಪೊಲೀಸ್ ಠಾಣೆಯ ಸಮೀಪ ಸೋನಿಪತ್-ಜಿಂದ್ ರಸ್ತೆ ಬದಿಯಲ್ಲಿ ಕರ್ಫ್ಯೂ ವೇಳೆ ಕಾರಿನೊಳಗೆ ಕುಳಿತುಕೊಂಡು  ಮದ್ಯ ಸೇವಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಆಕ್ಷೇಪಿಸಿದ್ದೇ  ಜಗಳಕ್ಕೆ ಕಾರಣವಾಗಿತ್ತು. ಆರೋಪಿಗಳು  ಹರಿತವಾದ ಆಯುಧಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News