ಮೊದಲು ಮೋದಿಯ 15 ಲಕ್ಷ ರೂ., 'ಪಿಎಂ ಕೇರ್ಸ್' ನಿಧಿಯ ಲೆಕ್ಕಕೊಡಿ: ಬಿ.ಎಲ್ ಸಂತೋಷ್ ಗೆ ಸಿದ್ದರಾಮಯ್ಯ ತಿರುಗೇಟು

Update: 2020-07-07 09:37 GMT

ಬೆಂಗಳೂರು, ಜು.7: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರೆಸ್ಸೆಸ್ ನಾಯಕ ಬಿ.ಎಲ್ ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿ.ಎಲ್ ಸಂತೋಷ್ ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ಪ್ರಧಾನಿ ಮೋದಿ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ 'ಪಿಎಂ ಕೇರ್ಸ್' ನಿಧಿಯ ಲೆಕ್ಕಕೊಡಿ ಎಂದು ತಿಳಿಸಿದ್ದಾರೆ. 

ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್ ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿ. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಬಿ.ಎಲ್ ಸಂತೋಷ್ ಅವರೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್‌ಗಿರಿ ಕೊಡಬಹುದೇನೋ ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News