ಕರ್ನಾಟಕವನ್ನು ಇಟಲಿ, ನ್ಯೂಯಾರ್ಕ್ ಮಾಡಬೇಡಿ: ಬಿಎಸ್‌ವೈಗೆ ಪತ್ರ ಬರೆದ ಎಚ್.ಕೆ.ಪಾಟೀಲ್

Update: 2020-07-07 12:08 GMT

ಬೆಂಗಳೂರು, ಜು. 7: 'ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ. ಕೊರೋನ ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ ಆ್ಯಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಿ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಕೊರೋನ ಸಂಕಷ್ಟದ ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕರನ್ನು ವಿಮೆ ವ್ಯಾಪ್ತಿಗೆ ಸರಕಾರವೇ ವಿಮಾ ಕಂಪೆನಿ ಪ್ರಿಮಿಯಂ ಭರಿಸಿ ವಿಮೆ ವ್ಯಾಪ್ತಿಗೆ ತರಬೇಕು. ಪರಿಸ್ಥಿತಿ ಹದಗೆಡುವ ಮುನ್ನ ಸೂಕ್ತ ನಿರ್ಣಯ ಕೈಗೊಳ್ಳಬೇಕು. ವೈದ್ಯರು, ಪೌರ ಕಾರ್ಮಿಕರು ಸೇರಿದಂತೆ ಕೊರೋನ ಯೋಧರಿಗೂ ಸೋಂಕು ತಗುಲುತ್ತಿರುವ ಕಾರಣ ಸಿಬ್ಬಂದಿ ಕೊರತೆ ಸಾಧ್ಯತೆ ಇದ್ದು, ಕೂಡಲೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು.

ಆ್ಯಂಬುಲೆನ್ಸ್ ಗಳ ಕೊರತೆ ತೀವ್ರ ಪ್ರಮಾಣದಲ್ಲಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನಗಳ ವಿಳಂಬವಾಗುತ್ತಿದೆ. ಆಂಬುಲೆನ್ಸ್ ಸಿಗದೇ ಮನೆ ಬಾಗಿಲಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರಂತೂ ಹಾಸಿಗೆ ಸಿಗದೇ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ಆದರೆ, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಸಾವಿರಾರು ಬಸುಗಳ ತಮ್ಮ ದೈನಂದಿನ ಸೇವೆಯನ್ನು ನಿಲ್ಲಿಸಿ ಖಾಲಿ ನಿಂತಿರುವಾಗಿ ಆ ಬಸ್‍ಗಳನ್ನು ತಾತ್ಕಾಲಿಕವಾಗಿ ಕನಿಷ್ಠ ಸೌಲಭ್ಯದೊಂದಿಗೆ ಆ್ಯಂಬುಲೆನ್ಸ್ ರೂಪದಲ್ಲಿ ಪರಿವರ್ತಿಸಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತಮ ಚಿಕಿತ್ಸೆ, ಆ್ಯಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳಾಗಿದ್ದು, ಈ ಹಕ್ಕುಗಳನ್ನು ದಿನನಿತ್ಯವು ನಮ್ಮ ರಾಜ್ಯದಲ್ಲಿ ಉಲ್ಲಂಘಿಸಲಾಗುತ್ತಿದೆ. ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯವಾದ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಸರಿಪಡಿಸಲು ಉನ್ನತ ಮಟ್ಟದ ಸಮಿತಿ ನೇಮಿಸಿ ಸೂಕ್ತವಾದಂತಹ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಪ್ರಮುಖವಾಗಿರುವ ಈ ಮೂರು ಕೆಲಸಗಳನ್ನು ನಾವು ತಕ್ಷಣ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.   

ಜೀವರಕ್ಷಕ ಸಾಧನಗಳಾದ ಸೂಕ್ತವಾದ ಔಷಧಿ ಸಕಾಲಕ್ಕೆ ಲಭ್ಯಗೊಳಿಸುವುದು, ಅಗತ್ಯವಿದ್ದಲ್ಲಿ ಐಸಿಯು ಮತ್ತು ವೆಂಟಿಲೇಟರ್ ಗಳನ್ನು ಅಗತ್ಯಕ್ಕೆ ತಕ್ಕಷ್ಟು ಸುಸಜ್ಜಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವುದು ಇಂದಿನ ಅಗತ್ಯಗಳಾಗಿವೆ. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಮತ್ತು ಸೌಲಭ್ಯ ಹೊಂದಿರುವ ತಾರಾ ಹೊಟೇಲ್‍ಗಳನ್ನು ಮತ್ತು ಆಸ್ಪತ್ರೆಯ ಅಗತ್ಯ ಪರಿಕರಗಳನ್ನು ಸರಕಾರ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ನಾನು ಹಲವಾರು ಸಂದರ್ಭಗಳಲ್ಲಿ ತಮ್ಮನ್ನು ಕೋರಿದ್ದೇನೆ.

ಈ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರನ್ನು, ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್‍ನಂತಹ ಹೀನಾಯ ಸ್ಥಿತಿಗೆ ದೂಡಿದ್ದಕ್ಕಾಗಿ ಜನರ ಆಕ್ರೋಶಕ್ಕೆ ಬಲಿಯಾಗುತ್ತೀರಿ. ದಯವಿಟ್ಟು ತುರ್ತಾದ ಇಂಥ ಸಂದರ್ಭದಲ್ಲಿ ಸೂಕ್ತವಾದಂಥ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಂಡು ಜನರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News