ಕೊವಾಕ್ಸಿನ್ ಪ್ರಥಮ ಹಂತದ ಪ್ರಯೋಗದ ವರದಿ ಸಲ್ಲಿಸಿದ ಬಳಿಕವಷ್ಟೇ ಮುಂದಿನ ಪರೀಕ್ಷೆ

Update: 2020-07-07 14:01 GMT

ಹೊಸದಿಲ್ಲಿ, ಜು.7: ಕೊರೋನ ಸೋಂಕಿನ ವಿರುದ್ಧದ ಔಷಧವಾದ ಕೊವಾಕ್ಸಿನ್ ಲಸಿಕೆಯನ್ನು 2020ರ ಆಗಸ್ಟ್ 15ರೊಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಸಬೇಕು ಎಂದು ಐಸಿಎಂಆರ್ ಸೂಚಿಸಿರುವಂತೆಯೇ, ಕೊವಾಕ್ಸಿನ್ ಲಸಿಕೆಯ ಪ್ರಥಮ ಹಂತದ ಪರೀಕ್ಷಾರ್ಥ ಪ್ರಯೋಗದ ವರದಿಯನ್ನು ಸಲ್ಲಿಸಿದ ಬಳಿಕವಷ್ಟೇ ಎರಡನೇ ಹಂತದ ಪರೀಕ್ಷೆಯನ್ನು ಮುಂದುವರಿಸಬೇಕು ಎಂದು ತಜ್ಞರ ಸಮಿತಿ ಸ್ಪಷ್ಟಪಡಿಸಿದೆ.

 ಕೊವಾಕ್ಸಿನ್ ಲಸಿಕೆಯ ಪ್ರಥಮ ಮತ್ತು ದ್ವಿತೀಯ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ಹೈದರಾಬಾದ್ ಮೂಲದ ಭಾರತ್ ಬಯೊಟೆಕ್ ಸಂಸ್ಥೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ದ್ವಿತೀಯ ಹಂತದ ವೈದ್ಯಕೀಯ ಪ್ರಯೋಗಕ್ಕೆ ಮುಂದಾಗುವ ಮುನ್ನ ಪ್ರಥಮ ಹಂತದ ವೈದ್ಯಕೀಯ ಪ್ರಯೋಗದ ಫಲಿತಾಂಶವನ್ನು ಡಿಸಿಜಿಐಗೆ ಸಲ್ಲಿಸಬೇಕು. ಅಲ್ಲದೆ ವೈದ್ಯಕೀಯ ಪ್ರಯೋಗ ನಡೆಸುವ ಸ್ಥಳಗಳಲ್ಲಿ ಅನಾಫಿಲ್ಯಾಕ್ಸಿಸ್(ತೀವ್ರ ಅಲರ್ಜಿಯ ಪ್ರತಿಕ್ರಿಯೆ)ನಂತಹ ತುರ್ತು ಸನ್ನಿವೇಶಗಳನ್ನು ನಿರ್ವಹಿಸುವ ವ್ಯವಸ್ಥೆ ಇರಬೇಕು. ಪರೀಕ್ಷೆ ನಡೆಸುವವರು ಸೂಕ್ತ ಅರ್ಹತೆ ಮತ್ತು ಅನುಭವ ಹೊಂದಿರಬೇಕು ಎಂದು ಸಮಿತಿ ಸೂಚಿಸಿದೆ.

 ವೈದ್ಯಕೀಯ ಪರೀಕ್ಷೆಯಲ್ಲಿ ಆರೋಗ್ಯವಂತ ವ್ಯಕ್ತಿಗಳನ್ನು ಮಾತ್ರ ದಾಖಲು ಮಾಡಿಕೊಳ್ಳಬೇಕು. ಕೊರೋನ ಸೋಂಕಿತರ ಸ್ಕ್ರೀನಿಂಗ್ ನಡೆಸುವಾಗ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ದೃಢೀಕೃತ ಪರೀಕ್ಷೆಯಾಗಿ ಬಳಸಬಹುದು ಎಂದು ತಜ್ಞರ ಸಮಿತಿ ಷರತ್ತು ವಿಧಿಸಿದೆ. ಲಸಿಕೆಯು ದೇಹದಲ್ಲಿ ಆ್ಯಂಟಿಬಾಡಿಯನ್ನು(ರೋಗ ಪ್ರತಿಕಾರಕ) ಉತ್ಪಾದಿಸಿದರೂ, ಅದು (ಆ್ಯಂಟಿಬಾಡಿ) ಎಷ್ಟು ಸಮಯದವರೆಗೆ ಉಳಿಯುತ್ತದೆ ಎಂಬುದು ಮುಖ್ಯವಾಗಿದೆ. ಕೆಲವೇ ವಾರ ಉಳಿದುಕೊಳ್ಳುವ ಆ್ಯಂಟಿಬಾಡಿಯಿಂದ ಹೆಚ್ಚಿನ ಪ್ರಯೋಜನವಿಲ್ಲ. ಯಾಕೆಂದರೆ ಪ್ರತೀ ವಾರ ಲಸಿಕೆ ಬಳಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಐಸಿಎಂಆರ್ ಸೂಚಿಸಿರುವ ಆಗಸ್ಟ್ 15ರ ಗಡುವಿಗೆ ಕೊವಾಕ್ಸಿನ್ ಲಸಿಕೆ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News