ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಯಿಂದ ಮಾಸ್ಕ್, ಸ್ಯಾನಿಟೈಸರ್ ಹೊರಗೆ: ಕಾರಣವೇನು ಗೊತ್ತಾ?

Update: 2020-07-07 14:13 GMT

 ಹೊಸದಿಲ್ಲಿ, ಜು.7: ಮುಖ ಕವಚ(ಮಾಸ್ಕ್) ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳ ಪೂರೈಕೆ ದೇಶದಲ್ಲಿ ಸಾಕಷ್ಟು ಇರುವುದರಿಂದ ಇವುಗಳನ್ನು ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಮಂಗಳವಾರ ಹೇಳಿದ್ದಾರೆ.

 ಮುಖಕವಚ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳ ಪೂರೈಕೆಗೆ ಉತ್ತೇಜನ ನೀಡಲು ಹಾಗೂ ಇವುಗಳ ಅನಗತ್ಯ ದಾಸ್ತಾನಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಇವುಗಳನ್ನು 100 ದಿನಗಳ ಅವಧಿಗೆ ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಗೆ ಸೇರಿಸಿತ್ತು. ಜೂನ್ 30ರವರೆಗೆ ಇವನ್ನು ಅಗತ್ಯ ಸರಕುಗಳ ಕಾಯ್ದೆಯಡಿ ಸೇರಿಸಲಾಗಿತ್ತು. ಈಗ ದೇಶದಲ್ಲಿ ಇವುಗಳ ಸರಬರಾಜು ಸಾಕಷ್ಟು ಇರುವುದರಿಂದ ಈ ಅವಧಿಯನ್ನು ವಿಸ್ತರಿಸುವುದಿಲ್ಲ . ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ ಎಂದು ನಂದನ್ ಹೇಳಿದ್ದಾರೆ.

  ಮಾಸ್ಕ್ ಗಳು (2 ಪದರ ಮತ್ತು 3 ಪದರದ ಸರ್ಜಿಕಲ್ ಮಾಸ್ಕ್ ಹಾಗೂ ಎನ್ 95 ಮಾಸ್ಕ್ ಗಳು) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ತರುವ ಮೂಲಕ ಇವುಗಳ ಉತ್ಪಾದನೆ, ಹಂಚಿಕೆ ಮತ್ತು ಬೆಲೆಯನ್ನು ನಿಯಂತ್ರಿಸಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿತ್ತು. ಅಲ್ಲದೆ ಇವುಗಳನ್ನು ದಾಸ್ತಾನು ಇರಿಸಿ, ಕೃತಕ ಅಭಾವ ಸೃಷ್ಟಿಸಿ ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಮಾರುವ ಪ್ರಕ್ರಿಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಇವನ್ನು ಅಗತ್ಯ ಸರಕುಗಳ ಕಾಯ್ದೆಯಡಿ ಸೇರಿಸಲಾಗಿತ್ತು ಎಂದು ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News