ವಿಕಾಸ್ ದುಬೆ ಪ್ರಕರಣ: 200 ಪೊಲೀಸರ ತನಿಖೆಗೆ ನಿರ್ಧಾರ

Update: 2020-07-07 14:49 GMT

ವಿಕಾಸ್ ದುಬೆ ಪ್ರಕರಣ: 200 ಪೊಲೀಸರ ತನಿಖೆಗೆ ನಿರ್ಧಾರ

 ಲಕ್ನೊ, ಜು.7: ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ 200 ಪೊಲೀಸರನ್ನು ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುಬೆಯನ್ನು ಬಂಧಿಸಲು ತೆರಳಿದ್ದ ಪೊಲೀಸರ ತಂಡದ ಮೇಲೆ ಆತನ ಸಹಚರರು ನಡೆಸಿದ್ದ ಗುಂಡಿನ ದಾಳಿಯಲ್ಲಿ 8 ಪೊಲೀಸರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ, ಚೌಬೆಪುರ ಪೊಲೀಸ್ ಠಾಣೆ , ಬಿಲ್ಹಾರ, ಕಕ್ವಾನ್, ಶಿವರಾಜ್ಪುರ ಪ್ರದೇಶದ ಪೊಲೀಸ್ ಠಾಣೆಗಳ ಸಿಬ್ಬಂದಿಗಖ ಬಗ್ಗೆ ಸಂಶಯ ಮೂಡಿದೆ.

ಪೊಲೀಸರು ದಾಳಿ ನಡೆಸುವ ಮಾಹಿತಿಯನ್ನು ಪೊಲೀಸರೇ ದುಬೆಗೆ ರವಾನಿಸಿದ್ದರು ಎಂಬ ಶಂಕೆಯಿದೆ.  ಈ ಹಿನ್ನೆಲೆಯಲ್ಲಿ ಪರಿಸರದ ಠಾಣೆಯ 200 ಪೊಲೀಸರನ್ನು ತನಿಖಾ ವ್ಯಾಪ್ತಿಗೆ ಒಳಪಡಿಸಲಾಗುವುದು. ಈ ಸಿಬ್ಬಂದಿಗಳ ಮೊಬೈಲ್ ಕರೆಯ ದಾಖಲೆಯನ್ನು ತನಿಖೆ ನಡೆಸಲಾಗುವುದು ಎಂದು ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.

ಈ ಮಧ್ಯೆ, ಕಾನ್ಪುರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ 10 ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು ಇವರ ಸ್ಥಾನದಲ್ಲಿ ಮೀಸಲು ಪಡೆಯ 10 ಪೊಲೀಸರನ್ನು ಕರ್ತವ್ಯದಲ್ಲಿ ನಿಯೋಜಿಸಲಾಗಿದೆ. ಪೊಲೀಸರ ದಾಳಿ ಬಗ್ಗೆ ದುಬೆಗೆ ಮಾಹಿತಿ ರವಾನಿಸಿದ ಆರೋಪದಲ್ಲಿ ಚೌಬೆಪುರ ಠಾಣಾಧಿಕಾರಿ ವಿನಯ್ ತಿವಾರಿ, ಎಸ್ಐಗಳಾದ ಕನ್ವರ್ಪಾಲ್ ಮತ್ತು ಕೃಷ್ಣಕುಮಾರ್ ಶರ್ಮ, ಕಾನ್ ಸ್ಟೇಬಲ್ ರಾಜೀವ್ ನನ್ನು ಅಮಾನತುಗೊಳಿಸಲಾಗಿದೆ. ಚೌಬೆಪುರ ಪೊಲೀಸ್ ಠಾಣೆಯಲ್ಲಿ ಈಗ ಕರ್ತವ್ಯದಲ್ಲಿರುವ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ಹಲವು ಪೊಲೀಸರು ದುಬೆಯಿಂದ ಹಲವು ಬಾರಿ ನೆರವು ಪಡೆದಿದ್ದರು ಎಂಬ ಅಂಶ ಬಯಲಾಗಿದೆ.

ಅಲ್ಲದೆ ಜುಲೈ 2ರಂದು ಸಂಜೆ 4 ಗಂಟೆಗೆ ಪೊಲೀಸರಿಗೆ ಕರೆ ಮಾಡಿದ್ದ ದುಬೆ, ಈ ವಿಷಯವನ್ನು ಮುಂದುವರಿಸಿದರೆ ಬಿಕಾರು ಗ್ರಾಮದಲ್ಲಿ ಹಲವರು ಸಾಯಲಿದ್ದಾರೆ ಎಂದು ಎಚ್ಚರಿಸಿದ್ದ. ಈತನ ಬೆದರಿಕೆ ಕಂಡು ತಾನು ದಿಗ್ಭ್ರಮೆಗೊಂಡಿದ್ದೆ ಎಂದು ಕಾನ್ಪುರ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಕೆಕೆ ಶರ್ಮ ಹೇಳಿದ್ದಾರೆ.

ಈ ಮಧ್ಯೆ, ತಾನು ಬಿಜೆಪಿ ಶಾಸಕರ ಸಹಿತ ಹಲವು ಸ್ಥಳೀಯ ರಾಜಕಾರಣಿಗಳಿಗೆ ಅತ್ಯಂತ ನಿಕಟವಾಗಿರುವುದಾಗಿ ದುಬೆ ಹೇಳಿಕೊಂಡಿರುವ 2017ರ ವೀಡಿಯೊ ತುಣುಕು ಈಗ ವೈರಲ್ ಆಗಿದೆ. ಬಿಜೆಪಿ ಶಾಸಕರಾದ ಭಗವತಿ ಸಾಗರ್ ಮತ್ತು ಅಭಿಜೀತ್ ಸಂಗ, ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರೊಂದಿಗೆ ತನಗೆ ಗೆಳೆತನವಿದೆ ಎಂದು ದುಬೆ ಪೊಲೀಸರಿಗೆ ಎಚ್ಚರಿಕೆ ನೀಡುವ ವೀಡಿಯೊ ಇದಾಗಿದೆ.ಆದರೆ ವೀಡಿಯೊ ನಕಲಿ ಎಂದು ಇಬ್ಬರೂ ಬಿಜೆಪಿ ನಾಯಕರು ಆರೋಪ ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News