83 ಲಕ್ಷ ಏಡ್ಸ್ ರೋಗಿಗಳಿಗೆ ಔಷಧದ ಕೊರತೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-07-07 15:04 GMT

83 ಲಕ್ಷ ಏಡ್ಸ್ ರೋಗಿಗಳಿಗೆ ಔಷಧದ ಕೊರತೆ: ವಿಶ್ವ ಆರೋಗ್ಯ ಸಂಸ್ಥೆ
ಲಂಡನ್, ಜು. 7: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ಹಿನ್ನೆಲೆಯಲ್ಲಿ, ಜಗತ್ತಿನ ಮೂರನೇ ಒಂದಕ್ಕೂ ಹೆಚ್ಚು ದೇಶಗಳು ಜೀವರಕ್ಷಕ ಏಡ್ಸ್ ಔಷಧಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸೋಮವಾರ ತಿಳಿಸಿದೆ.
ಇಂಥ 73 ದೇಶಗಳ ಪೈಕಿ 24 ದೇಶಗಳು, ತಮ್ಮಲ್ಲಿ ಈಗಾಗಲೇ ಏಡ್ಸ್ ಔಷಧಿಗಳ ಕೊರತೆ ತಲೆದೋರಿದೆ ಎಂಬುದಾಗಿ ಹೇಳಿವೆ ಎಂದು ಅದು ತಿಳಿಸಿದೆ.
‘‘ಈ ಸಮೀಕ್ಷೆಗಳ ಫಲಿತಾಂಶವು ಅತ್ಯಂತ ಕಳವಳಕಾರಿಯಾಗಿದೆ’’ ಎಂದು ಅಂತಾರಾಷ್ಟ್ರೀಯ ಏಡ್ಸ್ ಸಮ್ಮೇಳನದ ಆರಂಭದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.
‘‘ಏಡ್ಸ್ ಕಾಯಿಲೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಕಷ್ಟಪಟ್ಟು ಗಳಿಸಿದ ಯಶಸ್ಸನ್ನು ಕೋವಿಡ್-19 ಸಾಂಕ್ರಾಮಿಕವು ನಾಶಗೊಳಿಸಲು ನಾವು ಬಿಡಬಾರದು’’ ಎಂದರು.
ಅತ್ಯಂತ ಪೀಡಿತ 24 ದೇಶಗಳ ಸುಮಾರು 83 ಲಕ್ಷ ಜನರು ಈ ಆ್ಯಂಟಿರೆಟ್ರೋವಿಯಲ್ ಔಷಧಿಯನ್ನೇ ಅವಲಂಬಿಸಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಜಾಗತಿಕ ಮಟ್ಟದಲ್ಲಿ ಎಚ್ಐವಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸುಮಾರು ಮೂರನೇ ಒಂದು ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News