ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 6 ಮಂದಿಗೆ ಕೊರೋನ ಪಾಸಿಟಿವ್: ಸಚಿವ ಸಿ.ಟಿ. ರವಿಗೆ ಹೋಂ ಕ್ವಾರಂಟೈನ್

Update: 2020-07-07 15:07 GMT

ಚಿಕ್ಕಮಗಳೂರು, ಜು.7: ಜಿಲ್ಲೆಯಲ್ಲಿ ಮಂಗಳವಾರ 6 ಮಂದಿಗೆ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದು, ಈ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 100ಕ್ಕೇರಿದೆ. ಈ ಪೈಕಿ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 48 ಸಕ್ರೀಯ ಪ್ರಕರಣಗಳು ಇವೆ.

ಮಂಗಳವಾರ ವರದಿಯಗಿರುವ 6 ಪ್ರಕರಣಗಳ ಪೈಕಿ ಐದು ಪ್ರಕರಣಗಳು ಚಿಕ್ಕಮಗಳೂರು ತಾಲೂಕಿಗೆ ಸಂಬಂಧಿಸಿದ್ದಾಗಿದ್ದು, ಒಂದು ಪ್ರಕರಣ ಮೂಡಿಗೆರೆ ತಾಲೂಕಿಗೆ ಸೇರಿದ್ದಾಗಿದೆ. ಆರು ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಸೋಮವಾರ ಜಿಲ್ಲೆಯಲ್ಲಿ ವರದಿಯಾಗಿರುವ ಬಿಜೆಪಿ ಮುಖಂಡ ಹಾಗೂ ಮೂಡಿಗೆರೆಯ ವಿಧಾನ ಪರಿಷತ್ ಸದಸ್ಯರ ಪ್ರಾಥಮಿಕ ಸಂಪರ್ಕಗಳಾಗಿದ್ದು, ಸಿ.ಟಿ ರವಿ ಆಪ್ತರಾಗಿರುವ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಮತ್ತು ಪತ್ನಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಮೂಡಿಗೆರೆ ತಾಲೂಕಿನ ನಿವಾಸಿ ಹಾಗೂ ವಿಧಾನ ಪರಿಷತ್ ಸದಸ್ಯರ ಕಾರು ಚಾಲಕನಿಗೂ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. 

ಉಳಿದ ಎರಡು ಪ್ರಕರಣಗಳ ಪೈಕಿ ಒಂದು ಪ್ರಕರಣ ನಗರದ ಗೌರಿ ಕಾಲುವೆಯಲ್ಲಿ ಸೋಮವಾರ ವರದಿಯಾಗಿದ್ದ ಸೋಂಕಿತನ ಪ್ರಾಥಮಿಕ ಸಂಪರ್ಕವಾಗಿದ್ದು, ಮತ್ತೊಂದು ಪ್ರಕರಣ ಬೆಂಗಳೂರಿನಿಂದ ಇತ್ತೀಚೆಗೆ ನಗರಕ್ಕೆ ಹಿಂದಿರುಗಿದ್ದ ವ್ಯಕ್ತಿಯಲ್ಲಿ ಕಂಡು ಬಂದಿದೆ. ಸೋಂಕಿತರನ್ನು ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹಿನ್ನೆಲೆಯಲ್ಲಿ ನಗರದ ಗೌರಿ ಕಾಲುವೆ, ಕಲ್ಯಾಣ ನಗರದಲ್ಲಿರುವ ಸಿಡಿಎ ಕಚೇರಿ, ನಗರಸಭೆ ಮಾಜಿ ಅಧ್ಯಕ್ಷರ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕಳಸ ಪಟ್ಟಣದ ತನ್ನ ಮಗಳ ಮನೆಯಲ್ಲಿ ಎರಡು ತಿಂಗಳಿನಿಂದ ವಾಸವಿದ್ದ ವೃದ್ಧೆಯೊಬ್ಬರಿಗೆ ಶಿವಮೊಗ್ಗದಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದ ಪ್ರಕರಣ ಸಂಬಂಧ ವೃದ್ಧೆಯ ಮಗಳಿಗೂ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಕಳೆದ ಎರಡು ತಿಂಗಳಿನಿಂದ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ ಮಗಳ ಮನೆಯಲ್ಲಿ ನೆಲೆಸಿದ್ದ ವೃದ್ಧೆಗೆ ತೀವ್ರ ಜ್ವರ ಇದ್ದ ಹಿನ್ನೆಲೆಯಲ್ಲಿ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿದ್ದು, ವೃದ್ಧೆಯ ಪ್ರಾಥಮಿಕ ಸಂಪರ್ಕವಾಗಿದ್ದ ಮಗಳಿಗೂ ಸೋಂಕು ಇರುವುದು ಶಿವಮೊಗ್ಗದಲ್ಲೇ ದೃಢಪಟ್ಟಿದೆ ಎಂದು ತಿಳಿದು ಬಂದಿದ್ದು, ವೃದ್ಧೆಯ ಪ್ರಾಥಮಿಕ ಸಂಪರ್ಕಗಳ ಪೈಕಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೂ ಇದ್ದು, ಈತನ ಪ್ರಯೋಗಾಲಯದ ವರದಿ ಬರಬೇಕಿದೆ. ಈ ವಿದ್ಯಾರ್ಥಿಯ ಸಂಪರ್ಕಗಳನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ವೃದ್ಧೆ ಕಳಸ ಪಟ್ಟಣದಲ್ಲಿ ವಾಸವಿದ್ದ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಸಿ.ಟಿ.ರವಿ ಆಪ್ತರಾಗಿರುವ ಮೂಡಿಗೆರೆಯ ವಿಧಾನ ಪರಿಷತ್ ಸದಸ್ಯರಿಗೆ ಪಾಸಿಟಿವ್ ಇರುವುದು ಸೋಮವಾರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ವಿಪ ಸದಸ್ಯರ ಸಂಪರ್ಕವಾಗಿದ್ದು, ಸಿ.ಟಿ.ರವಿಗೆ ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಸದ್ಯ ಸಿ.ಟಿ.ರವಿ ಬೆಂಗಳೂರಿಗೆ ತೆರಳಿದ್ದು, ಅಲ್ಲಿಯೇ ಕ್ವಾರಂಟೈನ್‍ಗೆ ಒಳಪಡಲಿದ್ದಾರೆಂದು ತಿಳಿದು ಬಂದಿದೆ.

ಕೋವಿಡ್-19 ಸೋಂಕಿನಿಂದ ಚಿಕ್ಕಮಗಳೂರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧಾನ ಪರಿಷತ್ ಸದಸ್ಯರೊಬ್ಬರು ಸೋಮವಾರ ಆಸ್ಪತ್ರೆಯಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ನಿಮ್ಮ ಪ್ರೀತಿ ವಿಶ್ವಾಸದ ಮುಂದೇ ಕೊರೋನ ಏನೂ ಅಲ್ಲ ಎಂದಿದ್ದಾರೆ. ನನಗೆ ಇದೊಂದು ಕಾಯಿಲೆ ಎನಿಸುತ್ತಿಲ್ಲ, ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಕೊರೋನ ಸೋಂಕಿನಿಂದ ನಾನು, ನನ್ನ ಪತ್ನಿ ಮುಕ್ತರಾಗುತ್ತೇವೆ. ಶೀಘ್ರದಲ್ಲೇ ಮುಕ್ತರಾಗಿ ನಿಮ್ಮ ಜೊತೆಯಾಗಿ ಇರುತ್ತೇವೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ತಮ್ಮ ಹಿತೈಷಿಗಳ ಮೊಬೈಲ್‍ಗಳಿಗೆ ಕಳುಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಕೊರೋನ ಸೋಂಕು ಸೋಮವಾರ ವೃಢಪಟ್ಟ ಬೆನ್ನಲ್ಲೆ ಅವರ ಸಂಪರ್ಕಕ್ಕೆ ಬಂದಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಮತ್ತು ಅವರ ಪತ್ನಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇತ್ತೀಚೆಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸೋಂಕು ದೃಢಪಟ್ಟಿರುವ ಸಿಡಿಎ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷರೂ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿದಂತೆ ಅನೇಕ ಸ್ಥಳೀಯ ಬಿಜೆಪಿ ಮುಖಂಡರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳವಾರ ಸ್ಥಳೀಯ ಬಿಜೆಪಿ ಮುಖಂಡರು ಕೊರೋನ ಸೋಂಕಿನ ಭೀತಿಯಿಂದಾಗಿ ನಗರದಲ್ಲಿ ಸ್ವಾಬ್ ಸಂಗ್ರಹ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News