ಎಸಿಬಿ ದಾಳಿ: ಭೂ ವಿಜ್ಞಾನಿ ಲಂಚ ಸಮೇತ ಎಸಿಬಿ ಬಲೆಗೆ

Update: 2020-07-07 15:40 GMT

ಕೊಪ್ಪಳ, ಜು.7: ಲಂಚ ಸ್ವೀಕಾರ ಆರೋಪ ಕೇಳಿಬಂದ ಬೆನ್ನಲ್ಲೇ ಬೆಳಗಾವಿ ವಲಯದ ಎಸಿಬಿ ಎಸ್ಪಿ ಬಿ.ಸ್.ನ್ಯಾಮೇಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿರುವ ತನಿಖಾಧಿಕಾರಿಗಳು, ಭೂ ವಿಜ್ಞಾನಿಯೊಬ್ಬರು ಲಂಚ ಪಡೆಯುತ್ತಿದ್ದ ಪ್ರಕರಣಯೊಂದನ್ನು ಬೇಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸಿ.ಎಚ್.ರೂಪಾ(42) ಎಂಬಾಕೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಏನಿದು ಪ್ರಕರಣ?: ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸಂಬಂಧ ಪರವಾನಿಗೆ, ಕ್ರಷರ್, ಪರವಾನಿಗೆ ನವೀಕರಣ, ಮರಂ ವಾಹನ ಪರಿಶೀಲನೆ ನಡೆಸಲು ಮಾಲಕರಿಂದ ಲಂಚ ಪಡೆಯುತ್ತಿದ್ದ ಬಗ್ಗೆ ಸಿ.ಎಚ್.ರೂಪಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಈ ಸಂಬಂಧ ದೂರು ದಾಖಲಿಸಿಕೊಂಡು, ಬೆಳಗಾವಿ ವಲಯದ ಎಸಿಬಿ ಎಸ್ಪಿ ಬಿ.ಸ್.ನ್ಯಾಮೇಗೌಡ ಅವರ ಮಾರ್ಗದರ್ಶನದಲ್ಲಿ ಹಿರಿಯ ಎಸಿಬಿ ಅಧಿಕಾರಿಗಳು, ಮಂಗಳವಾರ ಇಲ್ಲಿನ ಕೊಪ್ಪಳ-ಹೊಸಪೇಟೆ ಮಾರ್ಗ ಮಧ್ಯೆಯ ಹಿಟ್ನಾಳ ಟೋಲ್ ಗೇಟ್ ಬಳಿ ಭೂ ವಿಜ್ಞಾನಿ ಸಿ.ಎಚ್.ರೂಪಾ ಅವರ ಕಾರನ್ನು ಜಪ್ತಿ ಮಾಡಿ, ಪರಿಶೀಲನೆ ನಡೆಸಿದಾಗ ಒಟ್ಟು 3.20 ಲಕ್ಷ ರೂ. ನಗದು ಮತ್ತು ದಾಖಲಾತಿ ಪತ್ತೆಯಾಗಿದೆ.

ಇದರ ಬಗ್ಗೆ ಮಾಹಿತಿ ಕೇಳಿದಾಗ, ಯಾವುದೇ ರೀತಿಯ ಉತ್ತರ ನೀಡದೆ, ಭೂ ವಿಜ್ಞಾನಿ ರೂಪಾ ಮೌನವಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೊಪ್ಪಳ ಜಿಲ್ಲಾ ಎಸಿಬಿ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News