‘ಎಲ್ಲರನ್ನೂ ಕೊಂದು ಹಾಕಿ’: ಪೊಲೀಸರು ಬರುತ್ತಿದ್ದಂತೆ ಹತ್ಯೆಗೆ ಆದೇಶ ನೀಡಿದ್ದ ವಿಕಾಸ್ ದುಬೆ

Update: 2020-07-07 17:19 GMT

ಲಕ್ನೋ: ಕಳೆದ ಶುಕ್ರವಾರ ನಸುಕಿನಲ್ಲಿ ಕಾನ್ಪುರ ಸಮೀಪದ ಬಿಕ್ರು ಗ್ರಾಮದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಬಂಧಿಸಲು ಆತನ ನಿವಾಸದ ಮೇಲೆ ದಾಳಿ ಮಾಡಲು ಪೊಲೀಸ್ ತಂಡ ತೆರಳಿತ್ತು. ಈ ಸಂದರ್ಭ 100ಕ್ಕೂ ಹೆಚ್ಚು ಮಂದಿಯ ಗ್ಯಾಂಗ್ ಹೊಂದಿದ್ದ ವಿಕಾಸ್ ದುಬೆ ‘ಎಲ್ಲರನ್ನೂ ಕೊಂದು ಬಿಡಿ’ ಎಂದು ಕಿರುಚಿದ್ದ ಎನ್ನಲಾಗಿದೆ. ಎಂಟು ಪೊಲೀಸರನ್ನು ದುಬೆ ಸಹಚರರು ಹತ್ಯೆ ಮಾಡಿದ ಘಟನೆ ಸಂಬಂಧ ದಾಖಲಾದ ಎಫ್ಐಆರ್ ನಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

ಈ ಕುಖ್ಯಾತ ರೌಡಿ ಮತ್ತು ಆತನ ಸಹಾಯಕ ಗೂಂಡಾಗಳು ಸ್ಥಳದಿಂದ ಪಲಾಯನವಾಗುವ ಮುನ್ನ ಪೊಲೀಸರ ಶಸ್ತ್ರಾಸ್ತ್ರಗಳನ್ನೂ ಅಪಹರಿಸಿದ್ದಾರೆ. ಎಸ್ಓ ಮಹೇಶ್ ಯಾದವ್, ಎಸ್ಓ ಬಿಥೂರ್ ಕೌಶಲೇಂದ್ರ ಪ್ರತಾತ್ ಸಿಂಗ್, ಅನೂಪ್ ಕುಮಾರ್ ಸಿಂಗ್ ಅವರ 9ಎಂಎಂ ಪಿಸ್ತೂಲ್, ಜಿತೇಂದ್ರವಕುಮಾರ್ ಅವರ ಎಕೆ-47 ರೈಫಲ್ ಮತ್ತು ಕಾನ್ಸ್ಟೇಬಲ್ ಸುಲ್ತಾನ್ ಅವರ ಬ 70 ಕ್ಯಾಟ್ರಿಡ್ಜ್ ಗಳನ್ನು ಅಪಹರಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ವಿವರಿಸಲಾಗಿದೆ.

ವಿಕಾಸ್ ದುಬೆ ಸೇರಿದಂತೆ 21 ಮಂದಿ ಗುರುತು ಪತ್ತೆಯಾದ ಮತ್ತು 80 ಮಂದಿ ಗುರುತು ಪತ್ತೆಯಾಗದವರ ಹೆಸರುಗಳನ್ನು ಠಾಣಾಧಿಕಾರಿ ವಿನಯ್ ತಿವಾರಿ ಚೌಬೇಪುರ ಠಾಣೆಯಲ್ಲಿ ದಾಖಲಿಸಿದ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. 

ಮಧ್ಯರಾತ್ರಿ 12.27ರ ಸುಮಾರಿಗೆ 32 ಪೊಲೀಸ್ ಸಿಬ್ಬಂದಿಯನ್ನು ಹೊಂದಿದ್ದ ತಂಡ ಬಿಕ್ರು ಗ್ರಾಮ ತಲುಪಿತ್ತು. ದುಬೆ ನಿವಾಸದ ಬಳಿಗೆ ತಂಡ ತಲುಪುತ್ತಿದ್ದಂತೆ ಎಲ್ಲ ಕಡೆಗಳಿಂದಲೂ ದಾಳಿ ನಡೆಯಿತು. ಎಲ್ಲರನ್ನೂ ಕೊಂದು ಬಿಡಿ. ನಮ್ಮ ಮೇಲೆ ದಾಳಿ ನಡೆಸಲು ಅವರಿಗೆ ಎಷ್ಟು ಧೈರ್ಯ ಎಂದು ದುಬೆ ಅಬ್ಬರಿಸುತ್ತಿದ್ದ ಎಂದು ವಿವರಿಸಲಾಗಿದೆ. ಮುಂಜಾನೆ 1 ಗಂಟೆ ವೇಳೆಗೆ ಆರಂಭವಾದ ಗುಂಡಿನ ದಾಳಿ 1:30ರವರೆಗೆ ಮುಂದುವರಿದಿತ್ತು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News