ಖಾಸಗಿ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸದಿದ್ದರೆ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಬಹಿಷ್ಕಾರ

Update: 2020-07-07 17:30 GMT

ಬೆಂಗಳೂರು, ಜು.7: ಕೋವಿಡ್-19 ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಆರೋಗ್ಯ ವಿಮೆ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಇಲ್ಲದಿದ್ದರೆ, ಎಸೆಸೆಲ್ಸಿ ಮೌಲ್ಯಮಾಪನ ಬಹಿಷ್ಕಾರ ಮಾಡುವುದಾಗಿ ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ಫೋರಂನ ಅಧ್ಯಕ್ಷ ಎ.ಪಿ.ರಂಗನಾಥ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲಾ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. ಮೌಲ್ಯಮಾಪನ ಸಂದರ್ಭದಲ್ಲಿ ಶಿಕ್ಷಕರು ಕೊರೋನ ಸೋಂಕು ತಗಲಿದರೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಇದಕ್ಕಾಗಿ ರಾಜ್ಯ ಸರಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಇಲ್ಲದಿದ್ದರೆ, ಮೌಲ್ಯಮಾಪನವನ್ನು ಬಹಿಷ್ಕರಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಕೋವಿಡ್‍ನಿಂದಾಗಿ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮ ಸಿಬ್ಬಂದಿಗಳಿಗೆ ಅರ್ಧ ಸಂಬಳ ಕೊಟ್ಟರೆ, ಕೆಲವು ಆಡಳಿತ ಮಂಡಳಿಗಳು ಸಂಬಳವನ್ನೇ ಕೊಟ್ಟಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಇವುಗಳು ಸ್ವಲ್ಪವಾದರೂ ಚೇತರಿಸಿಕೊಳ್ಳಬೇಕಾದರೆ, ಆರ್‍ಟಿಇ ಶುಲ್ಕದ ಬಾಕಿ 1025 ಕೋಟಿ ರೂ.ಇದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಎಸೆಸೆಲ್ಸಿ ಪರೀಕ್ಷೆಯ ಯಶಸ್ಸಿಗೆ ಖಾಸಗಿ ಶಾಲಾ ಶಿಕ್ಷಕರ ಪಾಲು ದೊಡ್ಡದಿದೆ. ತಮ್ಮ ಜೀವನವನ್ನು ಮುಡಿಪಿಟ್ಟು ಪರೀಕ್ಷೆಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೂ ಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರ ಯಾವ ನೆರವು ನೀಡದೆ ಪರೀಕ್ಷಾ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಆದೇಶಿಸುವುದು ಎಷ್ಟು ಸರಿಯೆಂದು ಅವರು ಪ್ರಶ್ನಿಸಿದ್ದಾರೆ.

ಫೋರಂ ಉಪಾಧ್ಯಕ್ಷ ಮುಕುಂದರಾಜು ಮಾತನಾಡಿ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮ ಸಿಬ್ಬಂದಿಗಳಿಗೆ ವೇತನ ಕೊಡಲಾಗದಷ್ಟು ದುಸ್ಥಿತಿಗೆ ತಲುಪಿವೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಖಾಸಗಿ ಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರ ಪ್ರತಿ ತಿಂಗಳು ಐದರಿಂದ ಹತ್ತು ಸಾವಿರ ರೂ. ಸಹಾಯಧನ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News