ಬಾಲಕಿಯ ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ, ದಂಡ

Update: 2020-07-07 17:56 GMT

ಕಾರವಾರ, ಜು.7: ಅಂಕೋಲಾ ತಾಲೂಕಿನ ಬ್ರಹ್ಮೂರ್-ಕಬಗಾಲ ಗ್ರಾಮದಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ತಾಲೂಕಿನ ಬ್ರಹ್ಮೂರು-ಕಬಗಾಲ್ ಗ್ರಾಮದ ಆರೋಪಿ ನಾರಾಯಣ ಗಣೇಶ ದೇಶಭಂಡಾರಿಗೆ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 

ಅಂಕೋಲಾ ತಾಲೂಕಿನ ಬ್ರಹ್ಮೂರ-ಕಬಗಾಲ್ ಗ್ರಾಮದ ಆರೋಪಿ ನಾರಾಯಣ ಗಣೇಶ ದೇಶಭಂಡಾರಿ ಕಳೆದ 2014 ಫೆ. 18ರಂದು ಮಧ್ಯಾಹ್ನ ಊಟದ ವಿರಾಮದ ಅವಧಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಕಬಗಾಲ ಊರಿನ ಕಿರಿಯ ಪ್ರಾಥಮಿಕ ಶಾಲೆಯ ಸಮೀಪ ಇರುವ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅವಳ ತಂದೆ ಬಂದಿದ್ದಾರೆಂದು ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರ ಮಾಡಿದ್ದ. ಅಲ್ಲದೇ, ಯಾರಿಗಾದರೂ ಹೇಳಿದರೆ ಕತ್ತು ಹಿಸುಕಿ ಕೊಲೆ ಮಾಡಿ ಹಳ್ಳದಲ್ಲಿ ಎಸೆಯುವುದಾಗಿ ಜೀವ ಧಮಕಿ ಹಾಕಿದ್ದ ಎಂದು ಆರೋಪಿಸಲಾಗಿತ್ತು. 

ಘಟನೆ ಕುರಿತಂತೆ ಅಂಕೋಲಾ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ರಿ ಪ್ರಕರಣದ ಕುರಿತು ಅಂದಿನ ಸಿ.ಪಿ.ಐ. ಗಣೇಶ ಹೆಗಡೆ ಹಾಗೂ ಸುದರ್ಶನ ಎಂ. ಇವರು ತನಿಖೆ ನಡೆಸಿ ಐ.ಪಿ.ಸಿ. ಕಲಂ: 376, 506 ಹಾಗೂ ಪೋಕ್ಸೋ ಕಾಯಿದೆ ಕಲಂ: 4 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ: 376 ಹಾಗೂ ಪೋಕ್ಸೋ ಕಾಯಿದೆ ಕಲಂ: 4ರ ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ, ಐ.ಪಿ.ಸಿ. ಕಲಂ 506 ರಡಿಯಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು ಎಲ್ಲಾ ಶಿಕ್ಷೆಯು ಒಟ್ಟಿಗೆ ಜಾರಿಗೆ ಬರುವಂತೆ ಜುಲೈ 7 ರಂದು ಅಂತಿಮ ತೀರ್ಪು ನೀಡಿದೆ. ನೊಂದ ಬಾಲಕಿಗೆ ದಂಡದ ಮೊತ್ತ ರೂಪಾಯಿ ಹತ್ತು ಸಾವಿರ ಪರಿಹಾರ ನೀಡುವಂತೆ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸುಭಾಷ ಪಿ. ಕೈರನ್ನ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News