ಮಹಿಳಾ ಸಿಬ್ಬಂದಿಗೆ ಆನ್‍ಲೈನ್‍ನಲ್ಲಿ ಲೈಂಗಿಕ ಕಿರುಕುಳ ಆರೋಪ: ಕ್ರಮಕ್ಕೆ ಎಐಎಂಎಸ್ಸೆಸ್ ಒತ್ತಾಯ

Update: 2020-07-07 18:23 GMT

ಬೆಂಗಳೂರು, ಜು.7: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ದೂರವಾಣಿ ಮೂಲಕ ಪುರುಷ ಉದ್ಯೋಗಿಗಳು ಲೈಂಗಿಕ ಕಿರುಕುಳ ನೀಡುತ್ತಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಒತ್ತಾಯಿಸಿದೆ,

ಆನ್‍ಲೈನ್ ಲೈಂಗಿಕ ಕಿರುಕುಳ ಸಂಬಂಧ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಈಗಾಗಲೇ ಬಂದಿರುವ ದೂರುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಮುಖಾಂತರ ಯಾವುದೇ ಕಚೇರಿ ಹಾಗೂ ಕಂಪೆನಿಗಳಲ್ಲಿ ತೊಂದರೆಗೊಳಗಾದ ಹೆಣ್ಣು ಮಕ್ಕಳನ್ನು ದೂರು ನೀಡುವಂತೆ ಆತ್ಮವಿಶ್ವಾಸ ತುಂಬಬೇಕು ಹಾಗೂ ದೂರು ನೀಡುವವರ ಹೆಸರು ಗೌಪ್ಯವಾಗಿರುವಂತೆ ಜಾಗ್ರತೆ ವಹಿಸಬೇಕು.

ಒಂದು ವೇಳೆ ಹೆಣ್ಣುಮಕ್ಕಳು ದುಡಿಯುವ ಕಂಪನಿಗಳಲ್ಲಾಗಲಿ ಅಥವಾ ಉದ್ಯೋಗ ಕ್ಷೇತ್ರಗಳಲ್ಲಾಗಲಿ ದೌರ್ಜನ್ಯ ತಡೆ ಸಮಿತಿ ರಚಿಸದೇ ಇದ್ದ ಪಕ್ಷದಲ್ಲಿ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕೆಲಸದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿರುವ ಅಪರಾಧಿಗಳಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆಯ ಅನ್ವಯ ಶಿಕ್ಷೆಗೊಳಪಡಿಸಬೇಕೆಂದು ಎಐಎಂಎಸ್ಸೆಸ್‍ನ ಕಾರ್ಯದರ್ಶಿ ಶಾಂತಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News