ಹರ್ಯಾಣದ ಹೊಟೇಲ್‌ನಲ್ಲಿ ಕಾಣಿಸಿಕೊಂಡ ಉ.ಪ್ರ.ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ

Update: 2020-07-08 06:15 GMT

 ಹೊಸದಿಲ್ಲಿ, ಜು.8:ಕಳೆದ ವಾರ ಉತ್ತರಪ್ರದೇಶದ ಕಾನ್ಪುರದಲ್ಲಿ ಎಂಟು ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಮಂಗಳವಾರ ದಿಲ್ಲಿ ಸಮೀಪದ ಹರ್ಯಾಣದ ಫರಿದಾಬಾದ್‌ನ ಹೊಟೇಲ್ ಬಳಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಫರಿದಾಬಾದ್ ಹೊಟೇಲ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸರು ಹೊಟೇಲ್‌ಗೆ ತಲುಪುವ ಕೆಲವೇ ನಿಮಿಷದ ಮೊದಲು ಮೋಸ್ಟ್ ವಾಂಟೆಡ್ ವ್ಯಕ್ತಿ ದುಬೆ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಹೊಟೇಲ್‌ಗೆ ತಲುಪಿದ ಬಳಿಕವಷ್ಟೇ ವಿಕಾಸ್ ದುಬೆ ಅಲ್ಲಿಗೆ ಬಂದಿದ್ದ ಎಂಬ ವಿಚಾರವನ್ನು ಪೊಲೀಸರು ಖಚಿತಪಡಿಸಿಕೊಂಡರು ಎಂದು ಹೊಟೇಲ್ ಮ್ಯಾನೇಜರ್ ತಿಳಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಸಿಸಿಟಿವಿಯಲ್ಲಿ ಟೀ ಶರ್ಟ್ ಧರಿಸಿದ್ದ ವಿಕಾಸ್ ದುಬೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದು ತೋರಿಸುತ್ತಿದೆ.

ಮಂಗಳವಾರ ಬಂಧಿತವಾಗಿರುವ ಇಬ್ಬರ ಪೈಕಿ ಅಂಕುರ್ ಎಂಬಾತ ದುಬೆಗೆ ಅಡಗಿಸಿಕೊಳ್ಳಲು ನೆರವಾಗಿದ್ದಾನೆ.

ಇನ್ನೊಬ್ಬ ಪ್ರಭಾತ್ ಎಂಬಾತ ದುಬೆಯ ಗ್ರಾಮದವನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೆಯನ್ನು ಬಂಧಿಸಲು ಉತ್ತರಪ್ರದೇಶ ಪೊಲೀಸ್‌ನ 25 ತಂಡಗಳು ದಾಳಿ ನಡೆಸಿದ್ದವು. ದುಬೆ ಶುಕ್ರವಾರದಿಂದ ತಲೆಮರೆಸಿಕೊಂಡಿದ್ದಾನೆ. ಆತನ ತಲೆಗೆ ಉತ್ತರಪ್ರದೇಶ ಪೊಲೀಸರು 2.50 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ವಿಕಾಸ್ ದುಬೆಯ ಸಹವರ್ತಿ ಅಮರ್ ದುಬೆಯನ್ನು ಬುಧವಾರ ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News