ಉ.ಪ್ರದೇಶ: ಅಕ್ರಮ ಕಲ್ಲಿನ ಗಣಿಗಳಲ್ಲಿ ಬುಡಕಟ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

Update: 2020-07-09 08:54 GMT
Photo: indiatoday.in

ಭಾರತದಲ್ಲಿ ಬಡತನವೆನ್ನುವುದು ಚಿತ್ರಹಿಂಸೆ. ಬಡತನದಲ್ಲಿ ಜೀವಿಸುವುದು ಶಾಪ. ಉತ್ತರಪ್ರದೇಶದ ಬುಂದೇಲ್‍ ಖಂಡ್ ವಲಯದ ಚಿತ್ರಕೂಟದಲ್ಲಿ ಇದೇ ಬಡತನವನ್ನು ಅಸ್ತ್ರವಾಗಿಸಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ರಾಜಾರೋಷವಾಗಿ ನಡಯುತ್ತಿದೆ. ಇಲ್ಲಿ ಬಡ ಬುಡಕಟ್ಟು ಕುಟುಂಬಗಳ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅಕ್ರಮ ಗಣಿಗಳಲ್ಲಿ ಕೆಲಸ ಮಾಡುವಂತೆ ಬಲವಂತಪಡಿಸಲಾಗುತ್ತಿದೆ. ಆ ಬಾಲಕಿಯರ ಬದುಕಿಗೆ ಅದು ಅನಿವಾರ್ಯವಾಗಿದೆ. ಆದರೆ, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಅವರ ವೇತನವನ್ನು ಸುಲಭವಾಗಿ ಕೊಡುವುದಿಲ್ಲ. ತಮ್ಮ ವೇತನವನ್ನು ಪಡೆಯಬೇಕಾದರೆ ಈ ಬಾಲಕಿಯರು ತಮ್ಮ ದೇಹಗಳನ್ನು ಮಾರಿಕೊಳ್ಳಬೇಕಾಗಿದೆ.

ಅಲ್ಲಿ ಬಡತನ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆಯೆಂದರೆ, ಆಟವಾಡುತ್ತಾ ಶಾಲೆಗೆ ಹೋಗುತ್ತಾ ಸಂತೋಷವಾಗಿ ಕಳೆಯಬೇಕಾದ ಪ್ರಾಯದಲ್ಲಿ ಈ ಮಕ್ಕಳು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಹೊರಬೇಕಾಗಿದೆ ಹಾಗೂ ಮನೆಯ ಆದಾಯಕ್ಕೆ ತಮ್ಮ ಕೊಡುಗೆ ನೀಡಬೇಕಾಗಿದೆ.

12-14ರ ಪ್ರಾಯದಲ್ಲಿ ಈ ಬಾಲಕಿಯರು ಅಕ್ರಮ ಗಣಿಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು 200-300 ದಿನ ಮಜೂರಿಗಾಗಿ ತಮ್ಮ ದೇಹಗಳನ್ನು ಮಾರಿಕೊಳ್ಳಲು ಆ ಬಾಲಕಿಯರ ಮೇಲೆ ಒತ್ತಡ ಹೇರುತ್ತಾರೆ ಎಂದು indiatoday.in ವರದಿ ಮಾಡಿದೆ.

ಕೆಲಸ ಕೇಳಲು ಗಣಿಗಳಿಗೆ ಹೋಗುವಾಗ, ನಿಮ್ಮ ದೇಹಗಳನ್ನೂ ನಮಗೆ ಒಪ್ಪಿಸಬೇಕು ಎಂಬ ಶರತ್ತಿನ ಅನ್ವಯ ಕೆಲಸ ಕೊಡಲು ಒಪ್ಪುತ್ತಾರೆ ಎಂದು ಕಾರ್ವಿ ಗ್ರಾಮದ ಸೌಮ್ಯ ಹೇಳುತ್ತಾರೆ.

“ನಾವು ಅಸಹಾಯಕರು. ನಾವು ಅದಕ್ಕೆ ಒಪ್ಪುತ್ತೇವೆ. ಅವರು ನಮಗೆ ಒಂದು ಕೆಲಸ ಕೊಡುತ್ತಾರೆ. ನಮ್ಮನ್ನು ಶೋಷಿಸುತ್ತಾರೆ ಹಾಗೂ ನಮ್ಮ ಪೂರ್ಣ ವೇತನವನ್ನೂ ಕೊಡುವುದಿಲ್ಲ. ಅವರ ಲೈಂಗಿಕ ಕಿರುಕುಳವನ್ನು ನಾವು ವಿರೋಧಿಸಿದರೆ ನಮ್ಮನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆಯನ್ನು ಹಾಕುತ್ತಾರೆ. ನಾವು ಕೆಲಸ ಮಾಡದಿದ್ದರೆ ಏನು ತಿನ್ನುವುದು?, ಕೊನೆಗೆ ಅವರ ಶರತ್ತುಗಳಿಗೆ ನಾವು ಒಪ್ಪುತ್ತೇವೆ” ಎಂದು ಅವರು ಹೇಳುತ್ತಾರೆ.

“ನಮ್ಮ ಕೆಲಸ ಉಳಿಯಬೇಕಾದರೆ ನಾವು ಅವರ ಶರತ್ತುಗಳಿಗೆ ಒಪ್ಪಬೇಕೆಂದು ಅವರು ಬೆದರಿಸುತ್ತಾರೆ. ನಾವು ಒಪ್ಪುತ್ತೇವೆ. ಅವರು ನಮಗೆ ಹಣದ ಆಮಿಷವನ್ನೂ ಒಡ್ಡುತ್ತಾರೆ. ಹಲವಾರು ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಪುರುಷರು ನಮ್ಮನ್ನು ಶೋಷಿಸುತ್ತಾರೆ. ಅವರ ಕಿರುಕುಳಗಳಿಗೆ ನಾವು ಪ್ರತಿರೋಧ ವ್ಯಕ್ತಪಡಿಸಿದರೆ ಬೆಟ್ಟದಿಂದ ಕೆಳಗೆ ಎಸೆಯುವುದಾಗಿ ಅವರು ನಮ್ಮನ್ನು ಬೆದರಿಸುತ್ತಾರೆ”  ಎಂದು ಸೌಮ್ಯ ಹೇಳುತ್ತಾರೆ.

ಹೆತ್ತವರಿಗೂ ಗೊತ್ತು

ಈ ಶೋಷಣೆಯ ಬಗ್ಗೆ ಅವರ ಹೆತ್ತವರಿಗೂ ಗೊತ್ತಿದೆ. ಆದರೆ, ಈ ವಿಷಯದಲ್ಲಿ ನಾವು ಏನೂ ಮಾಡದಷ್ಟು ಅಸಹಾಯಕರಾಗಿದ್ದೇವೆ ಎಂದು ಅವರು ಹೇಳುತ್ತಾರೆ. ಕುಟುಂಬಕ್ಕೆ ಆಹಾರ ಸಂಪಾದಿಸುವುದೇ ಒಂದು ದೊಡ್ಡ ಹೋರಾಟವಾಗಿದೆ ಎಂದು ರಿಂಕು ಅವರ ತಾಯಿ ಹೇಳುತ್ತಾರೆ.

“ನಾವು ಅಸಹಾಯಕರು. ಅವರು ದಿನಕ್ಕೆ 300-400 ರೂ. ಮಜೂರಿ ನೀಡುವುದಾಗಿ ಹೇಳುತ್ತಾರೆ. ಕೆಲವು ಸಲ ಅವರು 150 ರೂ. ಕೊಡುತ್ತಾರೆ. ಕೆಲವು ಸಲ 200 ರೂ. ಕೊಡುತ್ತಾರೆ. ನಮ್ಮ ಮಕ್ಕಳು ಕೆಲಸದಿಂದ ಮನೆಗೆ ಹಿಂದಿರುಗುವಾದ ಅವರು ಬವಣೆಯನ್ನು ಹೇಳುತ್ತಾರೆ. ಆದರೆ, ನಾವು ಏನು ಮಾಡಲು ಸಾಧ್ಯ? ನಾವು ಕಾರ್ಮಿಕರು. ನಾವು ನಮ್ಮ ಕುಟುಂಬಕ್ಕೆ ಆಹಾರ ಉಣಿಸಬೇಕಾಗಿದೆ. ನನ್ನ ಗಂಡ ಕಾಯಿಲೆಯಿಂದ ಮಲಗಿದ್ದಾರೆ. ಅವರ ಚಿಕಿತ್ಸೆಗೆ ಹಣ ಬೇಕಾಗಿದೆ” ಎಂದು ಅವರು ಹೇಳಿದರು.

“ಗುತ್ತಿಗೆದಾರರು ಗಣಿಗಳ ಸಮೀಪ ಬೆಟ್ಟದ ಹಿಂಭಾಗದಲ್ಲಿ ಕೆಲವು ಹಾಸಿಗೆಗಳನ್ನು ಹಾಕಿದ್ದಾರೆ. ಅವರು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಹಾಗೂ ಒಬ್ಬೊಬ್ಬರಾಗಿ ನಮ್ನನ್ನು ಶೋಷಿಸುತ್ತಾರೆ. ನಾವು ಒಬ್ಬೊಬ್ಬರಾಗಿ ಅಲ್ಲಿಗೆ ಹೋಗಬೇಕು. ನಾವು ಒಪ್ಪದಿದ್ದರೆ ಅವರು ನಮಗೆ ಹೊಡೆಯುತ್ತಾರೆ. ಆಗ ನೋವಾಗುತ್ತದೆ, ನಾವು ಕಿರುಚುತ್ತೇವೆ. ಆದರೆ ಸಹಿಸಿಕೊಳ್ಳುತ್ತೇವೆ. ನಾವು ಬೇರೆ ಏನು ಮಾಡಬಹುದು? ನಮಗೆ ಬದುಕು ಬೇಸರವಾಗಿದೆ. ಸಾಯಬೇಕು ಅಥವಾ ಓಡಿಹೋಗಬೇಕು ಅನಿಸುತ್ತಿದೆ” ಎಂದು ಕಾರ್ವಿ ಗ್ರಾಮದ 14 ವರ್ಷದ ಬಿಂದ್ಯಾ ಹೇಳುತ್ತಾರೆ.

ಮ್ಯಾಜಿಸ್ಟ್ರೇಟ್ ತನಿಖೆ

indiatoday.in ಟಿವಿಯ ತನಿಖಾ ವರದಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್, ವಿಷಯದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ರಾಜ್ಯ ಸರಕಾರವೂ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News