ಕಾನ್ಪುರ ಐಐಟಿ ಸಹಾಯಕ ಪ್ರಾಧ್ಯಾಪಕ ಕ್ಯಾಂಪಸ್‌ನಲ್ಲೇ ಆತ್ಮಹತ್ಯೆ

Update: 2020-07-09 04:15 GMT

ಲಕ್ನೋ, ಜು.9: ಕಾನ್ಪುರ ಐಐಟಿಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಮೋದ್ ಸುಬ್ರಮಣ್ಯನ್ (35) ಕ್ಯಾಂಪಸ್‌ನಲ್ಲೇ ನೇಣೀಗೆ ಶರಣಾದ ಆಘಾತಕಾರಿ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಕ್ಯಾಂಪಸ್‌ನ ಕೊಠಡಿಯೊಂದರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಷಯ ತಿಳಿದ ಕಲ್ಯಾಣಪುರ ಪೊಲೀಸರು ಕ್ಯಾಂಪಸ್‌ಗೆ ಆಗಮಿಸಿ ದೇಹವನ್ನು ಕೆಳಕ್ಕಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಪ್ರಮೋದ್ ಸುಬ್ರಹ್ಮಣ್ಯನ್ ಅವರ ಅಕಾಲಿಕ ಸಾವು ಇಂದು ಮಧ್ಯಾಹ್ನ ತಿಳಿದುಬಂತು. ದೇಶದ ಕಂಪ್ಯೂಟರ್ ಸೈನ್ಸ್ ಕ್ಷೇತ್ರದ ಉದಯೋನ್ಮುಖ ಪ್ರತಿಭೆಯನ್ನು ನಾವು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಹಾಗೂ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ; ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಐಐಟಿಕೆ ನಿರ್ದೇಶಕ ಪ್ರೊ.ಅಭಯ್ ಕರಂಡಿಕರ್ ಪ್ರಕಟನೆ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನೈಲಾನ್ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಟಿಪ್ಪಣಿ ಸಿಕ್ಕಲ್ಲ. ತಕ್ಷಣಕ್ಕೆ ಸಾವಿನ ಕಾರಣ ತಿಳಿದುಬಂದಿಲ್ಲ ಎಂದು ಎಸ್‌ಎಚ್‌ಓ ಅಶ್ವನಿ ಪಾಂಡೆ ಹೇಳಿದ್ದಾರೆ.

ಸದ್ಯಕ್ಕೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ಕ್ಯಾಂಪಸ್ ಖಾಲಿ ಇದ್ದು, ಕ್ಯಾಂಪಸ್‌ನಲ್ಲೇ ವಾಸಿಸುವ ಬೋಧಕ ಸಿಬ್ಬಂದಿಯಷ್ಟೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News