ಕೋವಿಡ್ ಹೆಸರಲ್ಲಿ ಜನರ ಗೊಂದಲಗಳಿಗೆ ಸರಕಾರ ಉತ್ತರಿಸಲಿ: ಎಸ್‍ಡಿಪಿಐ ಆಗ್ರಹ

Update: 2020-07-09 15:52 GMT
ಇಲ್ಯಾಸ್ ಮುಹಮ್ಮದ್ ತುಂಬೆ

ಬೆಂಗಳೂರು, ಜು.9: ಕಳೆದ ನಾಲ್ಕು ತಿಂಗಳುಗಳಲ್ಲಿ ಕೊರೋನ ಸಾಂಕ್ರಾಮಿಕ ರೋಗದ ಹೆಸರಲ್ಲಿ ಗೊಂದಲ, ಭಯ ಮತ್ತು ದಂಧೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಉತ್ತರಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

ಇಲಾಖೆಗಳ ಮತ್ತು ಆಸ್ಪತ್ರೆಗಳ ಪರಸ್ಪರ ಸಹಕಾರದ ಕೊರತೆ ಎದ್ದು ಕಾಣುತ್ತಿದೆ. ಔಷಧಿ ಮತ್ತು ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಆಂಬ್ಯುಲೆನ್ಸ್ ಗಳ ಕೊರತೆ ಇದೆ. ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಾಗಿಟ್ಟ 4 ಸಾವಿರ ಬೆಡ್‍ಗಳು ಸರಿಯಾಗಿ ಉಪಯೋಗವಾಗುತ್ತಿಲ್ಲ. ಶಾಸಕರುಗಳು, ಮಂತ್ರಿಗಳು ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲ. ಶವ ಸಂಸ್ಕಾರಕ್ಕಾಗಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಎಸ್‍ಡಿಪಿಐ ದೂರಿದೆ.

ರಾಜಕಾರಣಿಗಳು ಪಾಲುದಾರಿಕೆಯಿರುವ ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುತ್ತಿವೆ. ಆಶಾ ಕಾರ್ಯೆಕರ್ತೆಯರಿಗೆ ಮತ್ತು ಕೋವಿಡ್ ಉಪಚರಿಸುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಮತ್ತು ಭದ್ರತೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಆಹಾರ ಮತ್ತು ಇತರ ವ್ಯವಸ್ಥೆ ಸರಿಯಾಗಿ ನೀಡಲಾಗುತ್ತಿಲ್ಲ, ಖಾಸಗಿ ಆಸ್ಪತ್ರೆಗಳು ಇತರ ರೋಗಿಗಳನ್ನು ನಿರಂತರ ಲೂಟಿ ಮಾಡುತ್ತಿವೆ ಎಂದು ಎಸ್‍ಡಿಪಿಐ ಹೇಳಿದೆ.

ಆರೋಗ್ಯವಂತ ಗರ್ಭಿಣಿ ಮಹಿಳೆಯರನ್ನು ಕೋವಿಡ್ ಟೆಸ್ಟ್ ಹೆಸರಲ್ಲಿ ಹಣ ದೋಚಲಾಗುತ್ತಿದೆ. ಪ್ರಯೋಗಾಲಯಗಳಲ್ಲಿ ಟೆಸ್ಟ್ ಮಾಡಲ್ಪಟ್ಟ ರೋಗಿಗಳ ವರದಿಗಳ ಪ್ರತಿಗಳನ್ನು ರೋಗಿಗಳಿಗೆ ನೀಡಲಾಗುತ್ತಿಲ್ಲ. ಮರಣ ಹೊಂದಿದ ರೋಗಿಗಳ ಡಿಸ್ಚಾರ್ಜ್ ಸಮ್ಮರಿಗಳನ್ನು ಆಸ್ಪತ್ರೆಗಳು ನೀಡಲು ನಿರಾಕರಿಸಲಾಗುತ್ತಿದೆ. ಮೃತದೇಹಗಳನ್ನು ಕುಟುಂಬದವರಿಗೆ ತೋರಿಸಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಅನಗತ್ಯವಾಗಿ ದುಬಾರಿ ಶುಲ್ಕಗಳ ಬಿಲ್ ಮಾಡಿ ಜನರಿಂದ ಹೋಗಲು ದರೋಡೆ ಮಾಡುತ್ತಿವೆ. ಕೋವಿಡ್ ನೆಗೆಟಿವ್ ಜನರನ್ನು ಪಾಸಿಟಿವ್ ಎಂದು ಅಡ್ಮಿಟ್ ಮಾಡಿಸಿ ಅಪಾರ ಹಣ ದೋಚಿದ್ದೂ ಇವೆ. ಸಂತ್ರಸ್ತರು ಮತ್ತು ಪ್ರತ್ಯಕ್ಷದರ್ಶಿಗಳು ಎತ್ತುತ್ತಿರುವ ನೂರಾರು ಪ್ರಶ್ನೆಗಳಿಗೆ ಸರಕಾರ ಮೌನವಾಗಿರುವುದು ಸರಿಯಲ್ಲ. ಎಲ್ಲಾ ವಿಷಯಗಳಲ್ಲೂ ಸೂಕ್ತ ಪಾರದರ್ಶಕ ಮತ್ತು ಸತ್ಯಾಂಶವನ್ನು ಜನರಿಗೆ ತಿಳಿಸಬೇಕು. ಹಣ ಹೀರುವ ದಂಧೆಗಳೀಗೆ ಇಳಿದು ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಒತ್ತಾಯಿಸಿದ್ದಾರೆ.

ಮೃತ ದೇಹಗಳ ಅಂತ್ಯ ಸಂಸ್ಕಾರ, ರೋಗಿಗಳ ಉಪಚಾರ, ಆರೋಗ್ಯ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ನಮ್ಮ ಪಕ್ಷದ ನೂರಾರು ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಕಳೆದ ನಾಲ್ಕು ತಿಂಗಳುಗಳಿಂದ ನಿಸ್ಪಕ್ಷವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆಯೂ ಈ ಸಂಕಷ್ಟ ಸಂದರ್ಭದಲ್ಲಿ ಚಿಲ್ಲರೆ ರಾಜಕೀಯ ಮಾಡದೆ ಎಲ್ಲರೂ ಒಂದಾಗಿ ಕೊರೋನ ಪಿಡುಗಿನ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News