ಮಾರ್ಚ್ ಬಳಿಕ ಮೊದಲ ಬಾರಿಗೆ ಕೊರೋನವೈರಸ್ ಹರಡುವಿಕೆ ದರ ಹೆಚ್ಚಳ

Update: 2020-07-09 19:00 GMT

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಅಂದರೆ ಮಾರ್ಚ್ ತಿಂಗಳ ಬಳಿಕ ಮೊದಲ ಬಾರಿಗೆ ಹರಡುವಿಕೆ ದರ ಹೆಚ್ಚಳವಾಗಿರುವುದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ಜುಲೈ ತಿಂಗಳ ಮೊದಲ ವಾರ ವೈರಸ್ ಪುನರುತ್ಪತ್ತಿ ಪ್ರಮಾಣ 1.19ಕ್ಕೆ ಏರಿದೆ. ಮಾರ್ಚ್ 4ರಂದು ಗರಿಷ್ಠ ಪ್ರಮಾಣ ಅಂದರೆ 1.83ರಷ್ಟಿದ್ದ ಈ ಪ್ರಮಾಣ ಬಳಿಕ ಇಳಿಮುಖವಾಗಿತ್ತು. ಭಾರತದಲ್ಲಿ ವೈರಸ್ ಸೋಂಕು ನಿಯಂತ್ರಣಕ್ಕೆ ಬರಬೇಕಿದ್ದರೆ, ಈ ದರ 1ಕ್ಕಿಂತ ಕಡಿಮೆ ಇರಬೇಕಾಗಿದೆ.

ಸದ್ಯ ಇರುವ ಹರಡುವಿಕೆ ದರದ ಪ್ರಕಾರ, ಒಬ್ಬ ಸೋಂಕಿತ ವ್ಯಕ್ತಿ 1.19 ಮಂದಿಗೆ ರೋಗವನ್ನು ಹರಡಬಲ್ಲ ಎಂದು ಸಂಸ್ಥೆಯ ವಿಜ್ಞಾನಿ ಸಿತಾಬ್ರಾ ಸಿನ್ಹಾ ಹೇಳಿದ್ದಾರೆ. ಪ್ರಕರಣ ಹರಡುವಿಕೆ ಪ್ರಮಾಣ ಹೆಚ್ಚಳವಾಗುತ್ತಿದೆಯೇ, ಇಳಿಮುಖವಾಗುತ್ತಿದೆಯೇ ಎಂದು ತಿಳಿಯಲು ಕನಿಷ್ಠ ಹತ್ತು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಈಗ ಕಂಡುಬಂದಿರುವ ಹೆಚ್ಚಳ ಪ್ರಕ್ರಿಯೆ ಜೂನ್ ಮಧ್ಯಭಾಗದಲ್ಲಿ ಅಥವಾ ನಂತರದ ದಿನಗಳಲ್ಲಿ ಆರಂಭವಾಗಿರಬಹುದು ಎಂದು ಸಿನ್ಹಾ ಸ್ಪಷ್ಟಪಡಿಸಿದರು. ಸದ್ಯಕ್ಕೆ ಮೇ ಅಥವಾ ಜೂನ್ ಮೊದಲ ವಾರದಲ್ಲಿದ್ದ ಸ್ಥಿತಿಯಲ್ಲಿ ನಾವಿದ್ದೇವೆ. ಜೂನ್ ಕೊನೆಯ ವಾರಕ್ಕೆ ಇಳಿಮುಖವಾದ ಪ್ರಮಾಣವನ್ನು ನಾವು ಸುಸ್ಥಿರವಾಗಿ ಕಾಪಾಡಲು ಅಥವಾ ಸುಧಾರಿಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.

ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜುಲೈ 2 ಮತ್ತು 5ರಂದು ಹರಡುವಿಕೆ ಪ್ರಮಾಣ 1.19ಕ್ಕೆ ಹೆಚ್ಚಿದೆ. ಜೂನ್ ಮೊದಲ ವಾರದಲ್ಲಿ ಇದು 1.2ರಷ್ಟಿತ್ತು ಹಾಗೂ ಜೂನ್ 26ರ ವೇಳೆಗೆ 1.11ರಷ್ಟಿತ್ತು ಎಂದರು.

ದೆಹಲಿ ಮತ್ತು ಹರ್ಯಾಣದಲ್ಲಿ ಪರಿಸ್ಥಿತಿ ಸುಧಾರಿಸಿದ್ದರೆ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹರಡುವಿಕೆ ದರ ಗರಿಷ್ಠ ಇದೆ. ಗುಜರಾತ್ ಹಾಗೂ ಪಶ್ಚಿಮ ಬಂಗಾಲದಲ್ಲಿ ಹರಡುವಿಕೆ ದರ ಕುಸಿದು ಕ್ರಮವಾಗಿ 1.15 ಮತ್ತು 1.1ಕ್ಕೆ ಇಳಿದಿದೆ ಎಂದು ವಿವರಿಸಿದರು.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದಲ್ಲಿ ಭಾರತದ ವೈದ್ಯಕೀಯ ಮೂಲಸೌಕರ್ಯದ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News