ವಿಕಾಸ್ ದುಬೆ ಪತ್ನಿ, ಪುತ್ರ ಪೊಲೀಸ್ ಕಸ್ಟಡಿಗೆ

Update: 2020-07-10 04:51 GMT
ವಿಕಾಸ್ ದುಬೆ

ಹೊಸದಿಲ್ಲಿ: ಕಳೆದ ವಾರ ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿ, ಕುಖ್ಯಾತ ರೌಡಿ ವಿಕಾಸ್ ದುಬೆಯ ಪತ್ನಿ ಹಾಗೂ ಪುತ್ರನನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಗುರುವಾರ ವಿಕಾಸ್ ದುಬೆಯನ್ನು ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಬಂಧಿಸಿದ ಬಳಿಕ ಸಂಜೆ ಲಕ್ನೋದಿಂದ ಪತ್ನಿ ಹಾಗೂ ಪುತ್ರನನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ.

ಗುರುವಾರ ಸಂಜೆ ಲಕ್ನೋದ ಕೃಷ್ಣನಗರ ಪ್ರದೇಶದಲ್ಲಿ ಮಹಿಳೆ ಹಾಗೂ ಯುವಕನೊಬ್ಬ ಹೊಲದಲ್ಲಿ ಕೂತಿದ್ದುದನ್ನು ಕಂಡರು. ಪತಿಗೆ ಪೊಲೀಸರು ಚಿತ್ರಹಿಂಸೆ ನೀಡುವ ಭೀತಿಯಿಂದ ದುಬೆಯ ಪತ್ನಿ ಚಿಂತೆಗೀಡಾಗಿದ್ದಾರೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಶುಕ್ರವಾರದ ಹತ್ಯಾಕಾಂಡದ ಬಳಿಕ ವಿಕಾಸ್ ದುಬೆ ಪಲಾಯನ ಮಾಡಲು ನೆರವಾದ ಆರೋಪದಲ್ಲಿ ಪತ್ನಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇಷ್ಟಾಗಿಯೂ ಉತ್ತರ ಪ್ರದೇಶ ಪೊಲೀಸರು ದುಬೆಯನ್ನು ಬಂಧಿಸಲು ಸಾಧ್ಯವಾಗದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಈ ಬಗ್ಗೆ ಟ್ವೀಟ್ ಮಾಡಿ, “ವಿಕಾಸ್ ದುಬೆಯನ್ನು ನಾವು ಬಂಧಿಸಲು ಸಾಧ್ಯವಾಗಲಿಲ್ಲ. ಆತ ಉಜ್ಜಯಿನಿಯಲ್ಲಿ ಶರಣಾಗಿದ್ದಾನೆ. ಇಂಥ ದೊಡ್ಡ ಘಟನೆ ಬಳಿಕವೂ ಓಡಾಡುತ್ತಿದ್ದ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

ವಿಕಾಸ್ ದುಬೆ ಶರಣಾಗಿದ್ದಾನೆಯೇ ಅಥವಾ ಆತನನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ವಿಕಾಸ್ ದುಬೆ ಪೊಲೀಸ್ ಎನ್‍ಕೌಂಟರ್ ನಲ್ಲಿ ಹತನಾಗಿದ್ದಾನೆ. ಕಾನ್ಪುರ ತಲುಪುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ದುಬೆಯನ್ನು ಪೊಲೀಸರು ಗುಂಡಿಟ್ಟು ಕೊಂದರು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ದುಬೆ ಕೆಲವೇ ಕ್ಷಣದಲ್ಲಿ ಮೃತಪಟ್ಟ ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News