ಕೋವಿಡ್-19 ಸುಳ್ಳು ಮಾಹಿತಿ ವಿರುದ್ಧದ ಹೋರಾಟ: ಕೇರಳದ ಡಾ.ನೇತಾ ಹುಸೈನ್ ಗೆ ವಿಶ್ವಸಂಸ್ಥೆ ಶ್ಲಾಘನೆ

Update: 2020-07-10 05:15 GMT
ಡಾ.ನೇತಾ ಹುಸೈನ್

ಕೋಝಿಕ್ಕೋಡ್: ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಸುಳ್ಳು ಮಾಹಿತಿ ಹರಿದಾಡುತ್ತಿರುವುದರ ವಿರುದ್ಧ ಡಿಜಿಟಲ್ ಸಮರ ಸಾರಿದ ಇಲ್ಲಿನ ಸಂಶೋಧಕಿ ಡಾ.ನೇತಾ ಹುಸೈನ್ ಅವರನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ.

ವಿಶ್ವಸಂಸ್ಥೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಿಂದ ಇತ್ತೀಚೆಗೆ ಮಾಡಿದ ಟ್ವೀಟ್‍ನಲ್ಲಿ ಡಾ.ನೇತಾ ಹೆಸರನ್ನು ಉಲ್ಲೇಖಿಸಲಾಗಿದೆ. ಸ್ವೀಡನ್‍ನಲ್ಲಿರುವ ಕ್ಲಿನಿಕಲ್ ನರವಿಜ್ಞಾನಿ ಹಾಗೂ ಸಂಶೋಧಕಿ, ಕೋವಿಡ್-19 ಬಗ್ಗೆ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಅವಿತರವಾಗಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.

ವಿಕಿಪೀಡಿಯಾಗೆ ಮಾಹಿತಿ ಪರಿಷ್ಕರಿಸುವಲ್ಲಿ ಒಂದು ದಶಕದ ಅನುಭವ ಇರುವ ಡಾ.ನೇತಾ, ವೈದ್ಯಕೀಯ ಕ್ಷೇತ್ರದ ಅಧಿಕೃತ ಮಾಹಿತಿಯಷ್ಟೇ ಜನಸಾಮಾನ್ಯರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಅಪಾರ ಶ್ರಮ ವಹಿಸಿದ್ದರು. ಕೋವಿಡ್-19 ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಯತ್ನ ನಡೆಸಿದ್ದರು.

ಬೆಳ್ಳುಳ್ಳಿ, ಶುಂಠಿ, ವಿಟಮಿನ್ ಸಿ ಮತ್ತು ಹುಳಿ ಹಣ್ಣುಗಳನ್ನು ಸೇವಿಸುವುದರಿಂದ ಕೋವಿಡ್ ತಡೆಯಬಹುದು ಎನ್ನುವುದು ಒಂದು ಸುಳ್ಳು ಸುದ್ದಿಯಾಗಿತ್ತು. ಇನ್ನೊಂದು, ಅಧಿಕ ಉಷ್ಣತೆಯಲ್ಲಿ ಕೋವಿಡ್-19 ವೈರಸ್ ಬದುಕಲಾರದು ಎನ್ನುವುದು. ಇಂತಹ ಸುಳ್ಳಿನ ವಿರುದ್ಧ ಜನಜಾಗೃತಿ ಮೂಡಿಸಲು ವಿಕಿಪೀಡಿಯಾದಲ್ಲಿ 30 ಲೇಖನಗಳನ್ನು ಬರೆದಿರುವುದಾಗಿ ನೇತಾ ವಿವರಿಸಿದ್ದಾರೆ.

ಮಲೇರಿಯಾ ವಿರುದ್ಧದ ಹೈಡ್ರೋಕ್ಲೋರೋಕ್ಲಿನ್ ಕೋವಿಡ್-19 ಸೋಂಕಿಗೆ ಒಳ್ಳೆಯದಲ್ಲ. ಆದರೂ ಜನ ಇದು ಪರಿಣಾಮಕಾರಿ ಎಂದು ನಂಬುತ್ತಾರೆ ಎಂದು ನೇತಾ ವಿವರಿಸುತ್ತಾರೆ. ಆಂಧ್ರಪ್ರದೇಶದಲ್ಲಿ ಕೋವಿಡ್-19 ಸೋಂಕು ಗುಣಪಡಿಸುತ್ತದೆ ಎಂಬ ನಂಬಿಕೆಯಿಂದ ದತ್ತೂರ ಎಂಬ ವಿಷಕಾರಿ ಬೀಜವನ್ನು ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಆಸ್ಪತ್ರೆಗೆ ಸೇರಿದ ಘಟನೆಯಿಂದ ಆಘಾತಗೊಂಡು ಸುಳ್ಳುಮಾಹಿತಿ ವಿರುದ್ಧ ಸಮರ ಸಾರಿದ್ದಾಗಿ ನೇತಾ ಹೇಳಿದರು. ಇಂದಿಗೂ ವಾಟ್ಸ್ ಆ್ಯಪ್ ಗ್ರೂಪ್‍ಗಳ ಮೂಲಕ ಸುಳ್ಳುಸುದ್ದಿ ಹರಿದಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾಗಲೇ ಅಂದರೆ ಒಂದು ದಶಕದ ಹಿಂದೆಯೇ ನೇತಾ ಹುಸೈನ್ ವಿಕಿಪಿಡಿಯಾ ಜತೆ ಕೆಲಸ ಮಾಡುತ್ತಿದ್ದರು. ನನ್ನ ಫೇವರಿಟ್ ಖಾದ್ಯ ಚಮ್ಮತಿ ವಿಕಿಪಿಡಿಯಾದಲ್ಲಿ ಇಲ್ಲದ್ದನ್ನು ಕಂಡು ಈ ಬಗ್ಗೆ ಲೇಖನ ಬರೆಯಲು ಮುಂದಾದೆ. ಅದು ಆರಂಭ. ಇದೀಗ ನನಗೆ ಲೇಖನಗಳನ್ನು ಬರೆಯುವುದು ಸುಲಭ. ಈಗ ಸುಳ್ಳುಮಾಹಿತಿ ವಿರುದ್ಧದ ಸಮರವನ್ನು ವಿಕಿಪೀಡಿಯಾ ಮೂಲಕ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದರು.

ಮೂಲತಃ ಕುನ್ನಮಂಗಲಂನವರಾದ ನೇತಾ, ಸ್ವೀಡನ್‍ನ ಗುಟೆನ್‍ಬರ್ಗ್ ವಿವಿಯಲ್ಲಿ ಕ್ಲಿನಿಕಲ್ ನರವಿಜ್ಞಾನದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News