ಕೋವಿಡ್19 ಜಾಗೃತಿ: ಸರಳ ಕಾರ್ಯಸೂಚಿ ಬಿಡುಗಡೆಗೊಳಿಸಿದ ಕರ್ನಾಟಕ ಮುಸ್ಲಿಮ್ ಜಮಾಅತ್

Update: 2020-07-10 09:53 GMT

ಬೆಂಗಳೂರು: ಕೋವಿಡ್ ಗೆ ಸಂಬಂಧಿಸಿ ಮೊಹಲ್ಲಾ ಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಜನರಲ್ಲಿ ಧೈರ್ಯ ತುಂಬಲು ಸರಳ ಕಾರ್ಯಸೂಚಿಗಳನ್ನು ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಸಮಿತಿ ಬಿಡುಗಡೆಗೊಳಿಸಿದೆ.

ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟಗಳಲ್ಲಿ ಆಯಾ ಮಟ್ಟದ ಸ್ಥಳೀಯಾಡಳಿತದ ಅನುಮತಿಯೊಂದಿಗೆ ಈ ಜಾಗೃತಿ ಫ್ಲೆಕ್ಸ್/ಪೋಸ್ಟರ್ ಗಳನ್ನು ಪ್ರದರ್ಶಿಸಲಾಗುವುದು. ಮುಸ್ಲಿಮ್ ಜಮಾಅತ್ ಪ್ರಕಟಿಸುವ ಜಾಗೃತಿ ಕಾರ್ಯಸೂಚಿಗಳ ಜೊತೆ ಜೊತೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಉಲಮಾಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಲು ಪ್ರತಿ ಮೊಹಲ್ಲಾಗಳು ಪ್ರಯತ್ನಿಸಬೇಕು ಎಂದು ಮುಸ್ಲಿಮ್ ಜಮಾಅತ್ ರಾಜ್ಯ ಪ್ರ.ಕಾರ್ಯದರ್ಶಿ ಎನ್.ಕೆ.ಎಂ.ಶಾಫಿ ಸ‌ಅದಿ ಪತ್ರಿಕಟನೆಯಲ್ಲಿ ಸಾರ್ವಜನಿಕರೊಂದಿಗೆ ವಿನಂತಿಸಿದ್ದಾರೆ.

ಕಾರ್ಯಸೂಚಿಯ ಅಂಶಗಳು

► ಅನಗತ್ಯವಾಗಿ ಎಲ್ಲೆಂದರಲ್ಲಿ ಸುತ್ತಾಡುವ ಜನರಿದ್ದಾರೆ, ಅವರಲ್ಲಿ ಜಾಗೃತಿ ಮೂಡಿಸಬೇಕು.

►ಅತಿ ಅನಿವಾರ್ಯವಾಗಿ ಊರ ಹೊರಗೆ ಹೋಗಿ ಬರುವವರು ಸೋಂಕು ತಗಲದಂತೆ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳುವುದು, ಮಾಸ್ಕ್ ಮತ್ತು ಕೈ ಕವಚವನ್ನು ಕಡ್ಡಾಯವಾಗಿ ಧರಿಸುವುದು.

► ಊರಿನಲ್ಲಿ ಯಾರಾದರೂ ಕ್ಯಾರಂಟೈನ್‌ಗೆ ಒಳಗಾಗುವ ಸಂದರ್ಭ ಬಂದರೆ ಅದಕ್ಕೆ ಸೂಕ್ತ ಸುವ್ಯವಸ್ಥಿತ ಕ್ವಾರಂಟೈನ್ ಕಟ್ಟಡವನ್ನು ಈಗಲೇ ಗುರುತಿಸಿ ಇಡುವುದು.

►ಸಾಧ್ಯವಾದರೆ ಮೊಹಲ್ಲಾದಲ್ಲಿ ಆರೋಗ್ಯ ಇಲಾಖೆಯ ಅನುಮತಿಯೊಂದಿಗೆ ಫೀವರ್ ಕ್ಲಿನಿಕ್ ತೆರೆಯುವುದು.

► ಎಲ್ಲಾ ಮೊಹಲ್ಲಗಳು ಆಯಾ ಮೊಹಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆಯ ಪೂರ್ವಾನುಮತಿಯೊಂದಿಗೆ ತುರ್ತು ವಾಹನವನ್ನು ಸಿದ್ಧಗೊಳಿಸಿಡುವುದು.

► ಊರಿನ ಸೂಕ್ತ ಯುವಕರ ಒಟ್ಟುಗೂಡಿಸಿ ಜಿಲ್ಲಾಡಳಿತ-ಆರೋಗ್ಯ ಇಲಾಖೆಯಿಂದ ತರಬೇತಿ ಕೊಡಿಸಿ ಕೊರೋನ ಯೋಧರ ತಂಡವನ್ನು ರಚಿಸುವುದು.

►ಕೊರೋನದಿಂದ ಮೃತರಾದರೆ, ಮೃತದೇಹ ಕಫನ್, ದಫನ್ ಕಾರ್ಯನಿರ್ವಹಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಬಗ್ಗೆ ತರಬೇತು ಪಡೆದ ತಂಡವೊಂದನ್ನು ರಚಿಸಿ ಜಿಲ್ಲಾಡಳಿತದಿಂದ ಅನುಮೋದನೆ ಪಡೆದು ಕೊಳ್ಳುವುದು.

►ಊರಲ್ಲಿ ಯಾರಿಗಾದರೂ ಸೋಂಕು ತಗಲಿದರೆ ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕದೆ, ಧೈರ್ಯ ತುಂಬುವುದು.

►ಮೊಹಲ್ಲಾ ಕೇಂದ್ರದಲ್ಲಿ ಸಾಕಷ್ಟು ಪಿಪಿಇ ಕಿಟ್ ಗಳನ್ನು ಸಂಗ್ರಹಿಸಿಡುವುದು.

► ಮತ್ತೊಮ್ಮೆ ಲಾಕ್ ಡೌನ್ - ಸೀಲ್‌ಡೌನ್ ಘೋಷಿಸಲ್ಪಟ್ಟರೆ ಮೊಹಲ್ಲಾದಲ್ಲಿ ಯಾವ ಮನೆಯಲ್ಲಿ ಆಹಾರ ಹಾಗೂ ದೈನಂದಿನ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿ ಮೊಹಲ್ಲಾ ಮಟ್ಟದಲ್ಲಿ ಅಗತ್ಯ ಮೊತ್ತ ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ಯನ್ನು ಸ್ಥಾಪಿಸುವುದು.

► ಮಹಿಳೆಯರು ಸೇರಿದಂತೆ, ಊರಿನ ಆಯ್ದ ಜನರಿಗೆ ವಿವಿಧ ಸಂದರ್ಭದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಗಳ ಕುರಿತು ತರಬೇತಿ ನೀಡುವುದು.

► ಕೊವಿಡ್ ಸಂಕಷ್ಟದ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಲಕ್ಷಣ ಗೋಚರಿಸುತ್ತಿದ್ದು, ಮೊಹಲ್ಲಾದ ಎಲ್ಲಾ ಮನೆಯವರು ತಮ್ಮ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ, ಸಂಕಷ್ಟದ ಸಂದರ್ಭಕ್ಕಾಗಿ ಹಣ ಉಳಿತಾಯ ಮಾಡಿರುವಂತೆ ಪ್ರೇರೇಪಿಸುವುದು.

► ಮೊಹಲ್ಲಾ ಸಮಿತಿಯು ಸ್ಥಾಪಿಸುವ ಎಮರ್ಜೆನ್ಸಿ ಫಂಡ್ ಗೆ ಎಲ್ಲರೂ ತಮ್ಮ ಉಳಿತಾಯದಿಂದ ಆರ್ಥಿಕ ನೆರವು ಒದಗಿಸುವುದು.

► ಮೊಹಲ್ಲಾದ ಸರ್ವತೋಮುಖ ಅಭಿವೃದ್ದಿಗಾಗಿ ಊರಿನ ಸಂಘಟನೆಗಳ ಶಕ್ತಿ ಸಾಮರ್ಥ್ಯವನ್ನು ಸದ್ಬಳಕೆ ಮಾಡುವುದು.

► ಕೊರೋನದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಒದಗಿಸಿಕೊಡುವ ಬಗ್ಗೆ ಯೋಚಿಸುವುದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.

► ಮುಂದೆ ಎದುರಾಗಬಹುದಾದ ಮತ್ತು ಮಾಡಿಕೊಳ್ಳಬೇಕಾದ ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಿ ಒಂದು ಸೂಕ್ತ ನಿರ್ಧಾರಕ್ಕೆ ಬರಲು ಮೊಹಲ್ಲಾ ಆಡಳಿತ ಕಮಿಟಿ ವಿಶೇಷ ಮೀಟಿಂಗ್ ನಡೆಸುವುದು.

► ಎಲ್ಲಾ ಮನೆಯವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ, ಸೈಡ್ ಎಫೆಕ್ಟ್ ಇಲ್ಲದ ಮನೆಮದ್ದುಗಳನ್ನು ತಿಳಿಸಿ ಸೇವಿಸುವುದು. ಯಾರೂ ಭಯಭೀತರಾಗದೆ ಮನೋಧೈರ್ಯದೊಂದಿಗೆ ಇದ್ದು ದೇಹದ ಆರೋಗ್ಯವನ್ನು ಕಾಪಾಡುವುದು.

► ಸಾಂಕ್ರಾಮಿಕ ರೋಗದ ಭೀತಿಯಿಲ್ಲವೆಂದು ಖಚಿಡ ಇರುವ ಮೊಹಲ್ಲಾಗಳ ಮಸೀದಿಗಳಲ್ಲಿ ಚಿತ್ರ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಜಮಾತ್/ ಜುಮಾ ನಮಾಝ್ ನೆರೆವೇರಿಸುವುದು. ಆ ಕುರಿತು ಆಯಾ ಊರಿನ ಸಂಬಂಧಪಟ್ಟವರು ತೀರ್ಮಾನ ಕೈಗೊಳ್ಳಬೇಕು. ಸಾಂಕ್ರಮಿಕ ರೋಗದ ಭೀತಿಯಿರುವ ಮೊಹಲ್ಲಾಗಳ ಲಾಕ್‌ಡೌನ್' ದಿನಗಳಂತೆ ಮನೆಯಲ್ಲೇ ನಮಾಝ್ ನಿರ್ವಹಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News