ಉ.ಪ್ರದೇಶ ಪೊಲೀಸ್‌ ದೌರ್ಜನ್ಯ, ಅತಿಕ್ರಮಣದ ಸಂತ್ರಸ್ತರಿಗೆ ಕಾನೂನು ನೆರವು: ಪಾಪ್ಯುಲರ್ ಫ್ರಂಟ್

Update: 2020-07-10 09:46 GMT

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಪೊಲೀಸ್‌ ದೌರ್ಜನ್ಯ ಮತ್ತು ಅತಿಕ್ರಮಣದ ಸಂತ್ರಸ್ತರಿಗೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸಂಘಟನೆಯು ನೆರವು ಕಲ್ಪಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ತಿಳಿಸಿದೆ. 

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಸರ್ವಾಧಿಕಾರ ರೀತಿಯ ಆಡಳಿತವನ್ನು ನಡೆಸುತ್ತಿದ್ದು, ಇದರಲ್ಲಿ ಬಲಪಂಥೀಯ ಹಿಂದುತ್ವ ಮತಾಂಧರು ಮತ್ತು ಗೋರಕ್ಷಾ ಗುಂಪುಗಳಿಗೆ ಮುಸ್ಲಿಮರು ಮತ್ತು ದಲಿತರನ್ನು ನಿರ್ದಯವಾಗಿ ಕೊಲ್ಲುವ ಹಾಗೂ ಅವರಿಗೆ ಚಿತ್ರಹಿಂಸೆ ನೀಡುವ ಮುಕ್ತ ಅವಕಾಶವನ್ನು ನೀಡಲಾಗಿದೆ. ರಾಜ್ಯದಲ್ಲಿ ಅಮಾಯಕರ ಕಾನೂನುಬಾಹಿರ ಹತ್ಯೆಗಳು, ಅಕ್ರಮ ಬಂಧನಗಳು ಮತ್ತು ಅವರಿಗೆ ಚಿತ್ರಹಿಂಸೆ ನೀಡುವ ಘಟನೆಗಳು ಅಪಾಯಕಾರಿಯಾಗಿ ಹೆಚ್ಚುತ್ತಿವೆ. ರಾಜ್ಯದಲ್ಲಿ ತಾರತಮ್ಯದಿಂದ ಕೂಡಿದ ಸಿಎಎ ಮತ್ತು ಎನ್.ಆರ್.ಸಿ ಕಾಯ್ದೆ ವಿರುದ್ಧ ಜನಾಂದೋಲನಗಳು ಪ್ರಾರಂಭವಾದಂದಿನಿಂದ ರಾಜ್ಯ ಸರಕಾರವು ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ ನಾಯಕರು ಮತ್ತು ಅಮಾಯಕರ‌ ವಿರುದ್ಧ ದುಷ್ಟ ಹಗೆತನವನ್ನು ಪ್ರಾರಂಭಿಸಿದೆ. ಕೊರೋನದ‌ ಸನ್ನಿವೇಶವನ್ನೂ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಬಂಧನ ಹಾಗೂ ಅವರ‌ ಮೇಲೆ ದೌರ್ಜನ್ಯ ನಡೆಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ.

ಪಾಪ್ಯುಲರ್ ಫ್ರಂಟ್ ರಾಜ್ಯ ತಾತ್ಕಾಲಿಕ ಸಮಿತಿ ಸದಸ್ಯ ಮುಫ್ತಿ ಶೆಹಝಾದ್ ರಿಗೆ ಯುಪಿ ಪೊಲೀಸರು ನಿರಂತರವಾಗಿ ಪೀಡಿಸಿದ್ದಲ್ಲದೇ, ಅವರನ್ನು ಬಂಧಿಸಿ ವಾರಗಳ ಕಾಲ ಜೈಲಿನಲ್ಲಿರಿಸಿತು. ಉತ್ತರ ಪ್ರದೇಶದಲ್ಲಿ ವರ್ಷಾರಂಭದಲ್ಲಿ ನಡೆದ ಸಿಎಎ/ಎನ್.ಆರ್.ಸಿ ವಿರೋಧಿ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರದ ತನಿಖೆಗಾಗಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿದ್ದು ಅವರು ಮಾಡಿದ ತಪ್ಪಾಗಿತ್ತು. ಆ ಬಳಿಕದಿಂದ ಪೊಲೀಸರು ಅವರನ್ನು ಮತ್ತು ಅವರ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಲೇ‌ ಬಂದಿದ್ದರು. ಶರ್ಜೀಲ್ ಉಸ್ಮಾನಿ ಈ ರೀತಿಯ ಕಿರುಕುಳಕ್ಕೊಳಗಾದ ಇತ್ತೀಚಿನ ಬಲಿಪಶುವಾಗಿದ್ದು, ಪೊಲೀಸರೆಂದು ಹೇಳುವ ಐವರು ಅಪರಿಚಿತ ವ್ಯಕ್ತಿಗಳು ಅವರನ್ನು ಮನೆಯಿಂದ ಎತ್ತಿಕೊಂಡು ಹೋಗಿದ್ದರು. ಯುಪಿ ಪೊಲೀಸರು ಈವರೆಗೂ ಆತನ ಬಂಧನವನ್ನು ದೃಢಪಡಿಸಿಲ್ಲ ಮತ್ತು ಆತನ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಯುಪಿ ಪೊಲೀಸರು ಹೈಕೋರ್ಟ್ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾ, ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ನಡೆದ ನಷ್ಟದ ಹೆಸರಿನಲ್ಲಿ ಜನರ ಆಸ್ತಿ ಜಪ್ತಿ ಮಾಡಲು ಕೂಡ ಪ್ರಾರಂಭಿಸಿದೆ. ಈ ರೀತಿಯ ದಬ್ಬಾಳಿಕೆಯ ವಿಧಾನವನ್ನು ಸಮರ್ಥಿಸಿಕೊಳ್ಳಲು ರಾಜ್ಯದ ಸಚಿವ ಸಂಪುಟವು ಕರಾಳ ಕಾನೂನಿನ ನೆರವು ಪಡೆಯುತ್ತಿದೆ. ಇಂತಹ ಪ್ರಜಾಸತ್ತಾತ್ಮಕ ಮತ್ತು ಹಿಂಸಾತ್ಮಕ ಕಾರ್ಯಾಚರಣೆಗಳಿಂದ ಯೋಗಿಯ ಪೊಲೀಸರು ರಾಜ್ಯದಲ್ಲಿ ವಿರೋಧದ ಅಂತಿಮ ನಳಿಕೆಯನ್ನೂ ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ವಿಪಕ್ಷಗಳು ಅಸಮರ್ಥ ಮತ್ತು ನಿಷ್ಕ್ರಿಯವಾಗಿಬಿಟ್ಟಿವೆ ಎಂದು ಪಾಪ್ಯುಲರ್ ಫ್ರಂಟ್ ದೂರಿದೆ.

ಪ್ರಜಾಸತ್ತಾತ್ಮಕ ಧ್ವನಿಗಳನ್ನು ಇಂತಹ ಕ್ರೂರ ವರ್ತನೆಯಿಂದ ಮುಗಿಸಲು ಬಿಡಬಾರದು ಮತ್ತು ಪರಿಸ್ಥಿತಿಯು ಬೆದರಿಸಲಾಗದ ಮತ್ತು ಮೌನಗೊಳಿಸಲಾಗದಂತಹ ಒಂದು ಹೊಸ‌ ಜನಪರ‌ ರಾಜಕೀಯದ ಮೇಳೈಸುವಿಕೆಗೆ ಆಗ್ರಹಪಡಿಸುತ್ತಿದೆ ಎಂಬುದಾಗಿ ಪಾಪ್ಯುಲರ್ ಫ್ರಂಟ್ ನ ರಾಷ್ಟ್ರೀಯ ಸಮಿಯು ನಂಬುತ್ತದೆ. ಸಂಘಟನೆಯು ಉತ್ತರ ಪ್ರದೇಶದಲ್ಲಿ ಆಡಳಿತದ ದಮನದ ಸಂತ್ರಸ್ತರಿಗೆ ಎಲ್ಲಾ ರೀತಿಯ ಕಾನೂನು ನೆರವು ಮತ್ತು ಪ್ರಜಾಸತ್ತಾತ್ಮಕ ಬೆಂಬಲವನ್ನು ಕಲ್ಪಿಸಲು ನಿರ್ಧರಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅನೀಸ್‌ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News