ವಿವಿಧ ಕೋರ್ಸ್ ಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪ: ವ್ಯಕ್ತಿಯ ಬಂಧನ

Update: 2020-07-10 10:16 GMT

ಕಲಬುರಗಿ, ಜು.10: ನಗರದ ಬಟ್ಟೆ ಅಂಗಡಿಯಲ್ಲಿ 10, 12, ಐಟಿಐ, ಡಿಪ್ಲೋಮಾ, ಬಿಇ, ಬಿಟೆಕ್, ಮುತಾಂದ ಪದವಿಗಳ ಯಾವುದೇ ಶಿಕ್ಷಣ ನೀಡದೆ ನೇರವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲಿ ಅಂಕಪಟ್ಟಿಗಳು ನೀಡುತ್ತಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಎಸಿಪಿ ವಿಜಯಕುಮಾರ ನೇತೃತ್ವದ ತಂಡದ ಸ್ಟೇಷನ್ ಬಜಾರ್ ಪಿಎಸ್.ಐ ಎಲ್.ಎಚ್. ಗೌಂಡಿ, ಸಿಬ್ಬಂದಿ ಮಲ್ಲಣ್ಣಗೌಡ, ಶಿವಾನಂದ, ರಾಘವೇಂದ್ರ ಪೊಲೀಸ್ ಠಾಣೆಯ ಪಿ.ಐ ಅರುಣಕುಮಾರ, ಸಿಬ್ಬಂದಿ ಕಿಶೋರ್, ಸಿಕ್ರೇಶ್ವರ, ದಾಳಿ ನಡೆಸಿದರು.

ಗೌಸ್ ನಗರ ತಾರಫೇಲ್ ಬಡವಾಣೆ ನಿವಾಸಿ ಯುಸುಫ್ ಖಾನ್ (37)ನನ್ನು ಬಂಧಿತ ಆರೋಪಿ. ಎರಡು ಲಕ್ಷ 20 ಸಾವಿರ ನಗದು, ಎರಡು ಲ್ಯಾಪ್ ಟಾಪ್, ಒಂದು ಹಾರ್ಡ್ ಡಿಸ್ಕ್, ವಿವಿಧ ಕಾಲೇಜಿನ ಹೆಸರಲ್ಲಿರುವ ಲೋಗೋ, ಹ್ಯಾಂಡ್ ಬಿಲ್ ಹಾಗೂ ಅನೇಕ ವಿದ್ಯಾರ್ಥಿಗಳ ಹೆಸರಲ್ಲಿರುವ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಓರ್ವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ರಾಘವೇಂದ್ರ ಮತ್ತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಜಂಟಿ ಕಾರ್ಯಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಖಾನ್‌ ದೇಶದ ವಿವಿಧ ಭಾಗಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ಇಂಟರನೆಟ್‌ನಲ್ಲಿ ಪರಿಶೀಲಿಸಿ 10, 12ನೇ ತರಗತಿ, ಐಟಿಐ ಡಿಪ್ಲೋಮಾ, ಬಿಇ, ಬಿಟೆಕ್‌, ಎಂಬಿಎ, ಎಂಸಿಎ, ಎಂಟೆಕ್‌ ಪದವಿ ಪ್ರಮಾಣಪತ್ರಗಳನ್ನು ನೇರವಾಗಿ ಯಾವುದೇ ಶಿಕ್ಷಣ ನೀಡದೆ 30 ರಿಂದ 40 ದಿನಗಳಲ್ಲಿ ನೀಡುವುದಾಗಿ ತಿಳಿಸುತ್ತಿದ್ದ. ಬಳಿಕ ವಿದ್ಯಾರ್ಥಿಗಳಿಂದ ಝೆರಾಕ್ಸ್‌ ಅಂಕಪಟ್ಟಿ, ಐಡಿ ಪ್ರೂಫ್‌ ಮತ್ತು ಫೋಟೋಗಳನ್ನು ಪಡೆದು, ಬಿಇ, ಬಿಟೆಕ್‌ ಪದವಿ ಅಂಕಪಟ್ಟಿಗಳಿಗೆ 3 ಲಕ್ಷದಿಂದ ಮೂರೂವರೆ ಲಕ್ಷ, 90 ಸಾವಿರ ರೂ. ಗೆ ಎಂಬಿಎ, ಬಿಕಾಂ, ಬಿಎಸ್‌ಸಿ ಅಂಕಪಟ್ಟಿ ನೀಡುತ್ತಿದ್ದು, 40 ರಿಂದ 50 ಸಾವಿರಕ್ಕೆ ಎಸೆಸೆಲ್ಸಿ ಪಿಯುಸಿ ನಕಲಿ ಅಂಕಪಟ್ಟಿಗಳನ್ನು ಮಾಡಿಕೊಡುತ್ತಿದ್ದ ಎನ್ನಲಾಗಿದೆ.

ದೇಶದ ಬೇರೆ ಬೇರೆ ರಾಜ್ಯದ ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿಗಳನ್ನು ಮಾಡಿಕೊಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News