ಮಾನವೀಯತೆ ಮರೆತು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ: ಸಚಿವ ಸುಧಾಕರ್

Update: 2020-07-10 11:23 GMT

ಬೆಂಗಳೂರು, ಜು. 10: ಸರಕಾರ ಕೊರೋನ ಮಹಾಮಾರಿಯಂತ ಈ ಸನ್ನಿವೇಶದಲ್ಲಿ ಯಾವುದೇ ಯಡವಟ್ಟುಗಳನ್ನು ಮಾಡಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಈ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಎಲ್ಲ ರೀತಿಯ ಕ್ರಮ ಕೈಗೊಂಡು, ಜನರ ಜೀವ ಉಳಿಸಲು ಸಿದ್ಧವಾಗಿದ್ದೇವೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ  ಅವರು, `ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೆಮ್ಮು, ನಗಡಿ, ಮೈ-ಕೈ ನೋವಿಗೂ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳ ಬಳಿ ಹಣ ಪೀಕುತ್ತಿವೆ. ಬಿಬಿಎಂಪಿಯಿಂದ ಪತ್ರ ತೆಗೆದುಕೊಂಡು ಬನ್ನಿ ಎಂಬ ಉಡಾಫೆ ಉತ್ತರ ನೀಡುತ್ತಿರುವುದನ್ನು ಕೆಲ ಸುದ್ದಿ ಮಾಧ್ಯಮಗಳು ತೋರಿಸಿವೆ' ಎಂದು ತಿಳಿಸಿದ್ದಾರೆ.

ಮಾನವೀಯತೆ ಮರೆತು ಚಿಕಿತ್ಸೆ ಕೊಡದೇ ರೋಗಿಗಳನ್ನು ಪರದಾಡಿಸುವ ದೃಶ್ಯವನ್ನು ಸುದ್ದಿ ಮಾಧ್ಯಮಗಳು ತೋರಿಸಿವೆ. ಇದು ನನ್ನ ಗಮನಕ್ಕೂ ಬಂದಿದ್ದು, ನಮ್ಮ ಸರಕಾರ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಲು ಬದ್ಧವಿದೆ. ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ಡಾ.ಸುಧಾಕರ್ ಇದೇ ವೇಳೆ ಎಚ್ಚರಿಕೆಯನ್ನು ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ನಿವಾಸದಲ್ಲಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಕೆಲ ದಿನಗಳ ಕಾಲ ಮನೆಯಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಯ ನಿರ್ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅವರು ನೀಡುವ ಅಗತ್ಯ ಸಲಹೆಗಳನ್ನು ಪಾಲಿಸುತ್ತೇವೆ'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News