ಸರಕಾರದ ವಿರುದ್ಧ ಬೀದಿಗಿಳಿದ ಆಶಾ ಕಾರ್ಯಕರ್ತೆಯರು: ರಾಜ್ಯದ ಹಲವೆಡೆ ಧರಣಿ

Update: 2020-07-10 12:34 GMT

ಬೆಂಗಳೂರು, ಜು.9: ಮಾಸಿಕ ಹನ್ನೆರಡು ಸಾವಿರ ರೂ. ಗೌರವಧನ ನಿಗದಿಪಡಿಸುವುದು ಹಾಗೂ ಕೋವಿಡ್-19 ಸಂಬಂಧ ಪಿಪಿಇ ಕಿಟ್‍ಗಳನ್ನು ಒದಗಿಸುವಂತೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಬೆಂಗಳೂರು, ಧಾರವಾಡ, ದಾವಣಗೆರೆ, ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಧರಣಿ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, ನಮ್ಮ ಮನವಿಗೆ ಸರಕಾರ ಸ್ಪಂದಿಸದ ಕಾರಣದಿಂದ ಇಂದಿನಿಂದ ಧರಣಿ ಆರಂಭಿಸಿದ್ದೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸಂಘದ ಮುಖಂಡರನ್ನು ಕರೆದು ನಮ್ಮ ಸಮಸ್ಯೆಗಳ ಕುರಿತು ಚರ್ಚಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆಗೆ ಮನವಿ ಪತ್ರ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ರಮಾ ನೇತೃತ್ವದ ತಂಡ, ನಿನ್ನೆ(ಜು.9) ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಾಲೂಕು ಹಾಗೂ ಆರೋಗ್ಯಾಧಿಕಾರಿಗಳಿಗೆ ನಮ್ಮ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. ನಮ್ಮ ಬೇಡಿಕೆಗಳು ಈಡೇರುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲವೆಂದು ತಿಳಿಸಲಾಗಿತ್ತು. ಆದರೂ ಸರಕಾರ ನಮ್ಮ ಹಕ್ಕೊತ್ತಾಯಗಳನ್ನು ನಿರ್ಲಕ್ಷ್ಯ ಮಾಡುವ ರೀತಿಯಲ್ಲಿ ಮೌನ ವಹಿಸಿದೆ ಎಂದು ಟೀಕಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ತಮ್ಮ ಇಡೀ ದಿನವನ್ನು ಜನರ ಆರೋಗ್ಯ ಸೇವೆಗೆ ಮುಡಿಪಾಗಿಟ್ಟಿರುತ್ತಾರೆ. ಅವರು ಸಮಯದ ಮಿತಿಯಿಲ್ಲದೆ ಕಾರ್ಯನಿರ್ವಹಿಸುವಂತಹ ಸಂದರ್ಭಗಳೇ ಹೆಚ್ಚಾಗಿರುತ್ತದೆ. ಹೀಗಾಗಿ ಇವರ ಜೀವನ ನಿರ್ವಹಣೆಗೆ ಕನಿಷ್ಠ 12 ಸಾವಿರ ರೂ.ಗೌರವಧನ ಕೊಡಬೇಕೆಂದು ಮನವಿ ಮಾಡುತ್ತಿದ್ದೇವೆ. ಇದನ್ನು ನೀಡಲು ಸರಕಾರ ಮೀನಾಮೇಷ ಎಣಿಸುವುದು ಸರಿಯಲ್ಲವೆಂದು ಅವರು ತಿಳಿಸಿದ್ದಾರೆ.

ಇನ್ನು ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಜನತೆಯ ಮನೆ ಬಾಗಿಲಿಗೆ ಹೋಗಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್-19ಕ್ಕೆ ತುತ್ತಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್‍ಗಳನ್ನು ಒದಗಿಸಬೇಕೆಂದು ಕೇಳುತ್ತಿದ್ದೇವೆ. ಇದಕ್ಕೂ ರಾಜ್ಯ ಸರಕಾರ ಸ್ಪಂದಿಸದಿರುವುದು ಆಶ್ಚರ್ಯ ತರಿಸಿದೆ ಎಂದು ಅವರು ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಕೋವಿಡ್-19 ಸಂಬಂಧ ಪಿಪಿಇ ಕಿಟ್ ವಿತರಣೆ, ಆಶಾ ಕಾರ್ಯಕರ್ತೆಯರ ಮೇಲೆ ನಡೆಯುತ್ತಿರುವ ಹಲ್ಲೆ ತಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಸಂಬಂಧ ರಾಜ್ಯ ಸರಕಾರ ನಮ್ಮನ್ನು ಕರೆದು ಚರ್ಚೆ ಮಾಡದೆ ನಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ.

-ನಾಗಲಕ್ಷ್ಕಿ, ಕಾರ್ಯದರ್ಶಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News