ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿ ಒಡಕು: ನಿತೀಶ್ ಕುಮಾರ್ ನಿರ್ಧಾರಕ್ಕೆ ಚಿರಾಗ್ ಪಾಸ್ವಾನ್ ಟೀಕೆ

Update: 2020-07-10 12:25 GMT

ಪಾಟ್ನಾ: ಕೊರೋನ ಸಮಸ್ಯೆಯ ನಡುವೆಯೂ ಬಿಹಾರದಲ್ಲಿ ಈ ವರ್ಷ ಚುನಾವಣೆ ನಡೆಸುವ ಇಂಗಿತ ಹೊಂದಿರುವುದಕ್ಕಾಗಿ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ತಮ್ಮ  ಮಿತ್ರ ಪಕ್ಷವೊಂದರಿಂದಲೇ ತರಾಟೆಗೊಳಗಾಗಿದ್ದಾರೆ.

ಜೆಡಿಯು ಪಕ್ಷದ ಮಿತ್ರ ಪಕ್ಷವಾಗಿರುವ ಲೋಕ್ ಜನಶಕ್ತಿ ಪಾರ್ಟಿಯ ನಾಯಕ ಚಿರಾಗ್ ಪಾಸ್ವಾನ್ ಕೂಡ ಚುನಾವಣೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ  ಈಗಾಗಲೇ ಇತ್ತೀಚೆಗೆ ಹಲವು ಬಾರಿ ಸಿಎಂ ಅವರನ್ನು ಕುಟುಕಿರುವ ಚಿರಾಗ್, ಈ ಬಾರಿ ಸಾರ್ವಜನಿಕವಾಗಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ ಹಾಗೂ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಅಭಿಪ್ರಾಯಕ್ಕೆ ದನಿಗೂಡಿಸಿದ್ದಾರೆ.

``ಚುನಾವಣಾ ಆಯೋಗ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು, ಇಲ್ಲದೇ ಹೋದಲ್ಲಿ  ಚುನಾವಣೆಯಿಂದಾಗಿ ಜನಸಂಖ್ಯೆಯ ಹೆಚ್ಚಿನ ಜನರು ಅಪಾಯಕ್ಕೀಡಾಗಬಹುದು. ಸಾಂಕ್ರಾಮಿಕ ರೋಗ ಹರಡುವಿಕೆ ಸಮಸ್ಯೆಯ ನಡುವೆ ಚುನಾವಣೆ ನಡೆದಲ್ಲಿ ಚುನಾವಣಾ ಪ್ರಮಾಣವೂ ಕುಸಿತ ಕಾಣಬಹುದು ಹಾಗೂ ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ'' ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.

ವಿಪಕ್ಷ ರಾಷ್ಟ್ರೀಯ ಜನತಾ ದಳ ಈಗಾಗಲೇ ನಿತೀಶ್‍ರನ್ನು ಇದೇ ವಿಚಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. “ಬಡವರು ಸಾಯುತ್ತಿದ್ದಾರೆ, ಆದರೆ ಅವನ್ನು ನೋಡಿಕೊಳ್ಳುವ ಬದಲು ಈ ಜನರಿಗೆ ತಮ್ಮ ಕುರ್ಚಿಯದ್ದೇ ಚಿಂತೆಯಾಗಿದೆ”  ಎಂದು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News