ರಾಜ್ಯ ಮಾನವ ಹಕ್ಕುಗಳ ಆಯೋಗ ಮೌನವಾಗಿರುವುದೇಕೆ: ಎಚ್.ಕೆ.ಪಾಟೀಲ್ ಪ್ರಶ್ನೆ

Update: 2020-07-10 13:07 GMT

ಬೆಂಗಳೂರು, ಜು. 10: `ಗೌರವಯುತ ಶವಸಂಸ್ಕಾರ, ಅಗತ್ಯ ಆಂಬುಲೆನ್ಸ್ ವ್ಯವಸ್ಥೆ, ಸಕಾಲಕ್ಕೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ಮಾನವ ಹಕ್ಕುಗಳಲ್ಲವೇ? ಈ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮಕ ಕರ್ತವ್ಯ ಹೊಂದಿರುವ ಸರಕಾರವೇ ಇವುಗಳ ಉಲ್ಲಂಘನೆಯ ಬಗ್ಗೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮ. ಪ್ರತಿದಿನ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆದಿರುವಾಗ ಕಾನೂನಾತ್ಮಕವಾಗಿ ರಚನೆಯಾಗಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮೌನ ಪ್ರೇಕ್ಷಕನಾಗಿರಬಹುದೇ?' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.

'ಮಾನವ ಹಕ್ಕುಗಳ ಆಯೋಗ ಸ್ಥಾಪನೆ ಮಾಡಿ ಅದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಎತ್ತರಕ್ಕೆ ಏರಿದ ವ್ಯಕ್ತಿ ಮತ್ತು ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ನೇಮಕ ಮಾಡಿ ಹಲವು ಅಧಿಕಾರ ನೀಡಿರುವ ಉದ್ದೇಶ ಈ ಆಯೋಗ ಪಾದರಸದಂತೆ ಕೆಲಸ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ತಡೆದು, ಸೂಕ್ತ ಕ್ರಮಗಳಿಗಾಗಿ ಶಿಫಾರಸು ಮಾಡುವುದು, ಸರಕಾರವನ್ನು ಎಚ್ಚರಗೊಳಿಸುವುದು, ಉಲ್ಲಂಘನೆಗೆ ಕಾರಣರಾದವರ ಬಗ್ಗೆ ಕ್ರಮವಿಡುವುದು ಹಾಗೂ ತೊಂದರೆಯಾದವರಿಗೆ ಉಲ್ಲಂಘನೆಯಿಂದಾಗಿ ಆಗಿರುವ ಹಾನಿಗಾಗಿ ಪರಿಹಾರ ದೊರಕಿಸುವುದು ಆಯೋಗದ ಮಹತ್ವದ ಕರ್ತವ್ಯ' ಎಂದು ತಿಳಿಸಿದ್ದಾರೆ.

'ಆಯೋಗ ತನ್ನ ಕರ್ತವ್ಯದಿಂದ ವಿಮುಖವಾಗಿದೆ. ತಕ್ಷಣ ನನ್ನ ಈ ಪತ್ರವನ್ನು ದೂರು ಎಂತಲೋ, ಸಲಹೆ ಎಂತಲೋ ಸ್ವೀಕರಿಸಿ ತಕ್ಷಣ ಅಗತ್ಯ ಕ್ರಮಗಳಿಗೆ ಹೆಜ್ಜೆಯಿಡಲು ಕೋರುವೆ. ದೇಶದ ಇಂಥ ಕಠಿಣ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಜಾಗೃತರಾಗಬೇಕು. ಮಾನವ ಹಕ್ಕುಗಳ ಆಯೋಗವನ್ನು ವಿಶೇಷ ಉದ್ದೇಶ ಹಾಗೂ ನಿರೀಕ್ಷೆ ಅಪೇಕ್ಷೆಯಿಂದ ಸ್ಥಾಪಿಸಲಾಗಿದೆ. ಜನರ ಜಾಗೃತೆ, ನಿರೀಕ್ಷೆಯಂತೆ ಕರ್ತವ್ಯ ನಿರ್ವಹಣೆಗೆ ಆಯೋಗ ಸನ್ನದ್ಧವಾಗಲಿ ಎಂದು ಎಚ್.ಕೆ.ಪಾಟೀಲ್ ಆಗ್ರಹಿದ್ದಾರೆ.

ಮಾನವ ಹಕ್ಕುಗಳ ಆಯೋಗವು ಆಹ್ವಾನಿಸಿದರೆ, ಚರ್ಚೆ ಬಯಸಿದರೆ ಇನ್ನೂ ಹೆಚ್ಚಿನ ವಿವರ ಲಭ್ಯಗೊಳಿಸುವೆ. ಜನ ಕಲ್ಯಾಣ ಎಲ್ಲ ಸಂಸ್ಥೆಗಳ ಉದ್ದೇಶ, ಗಾಬರಿಗೊಳಿಸುವ ಇಂಥ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದಿಂದ ಆಯೋಗ ತನ್ನ ಉಳಿದೆಲ್ಲ ಕೆಲಸ ಬದಿಗೊತ್ತಿ ಕೊರೋನ ಸಂದರ್ಭದಲ್ಲಿ ವಿಶಿಷ್ಟ ಕರ್ತವ್ಯ ನಿರ್ವಹಣೆಗೆ ಮುಂದಾಗಲಿ' ಎಂದಿರುವ ಎಚ್.ಕೆ.ಪಾಟೀಲ್, ಕೊರೋನ ಮಾರಿಯಿಂದಾಗಿ ಕರ್ನಾಟಕದ ಜನ ವಿಲವಿಲ ಒದ್ದಾಡುತ್ತಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ 2 ಸಾವಿರಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದಾರೆ. 40-50 ಜನ ಸಾವಿಗೀಡಾಗುತ್ತಿದ್ದಾರೆ. ಸರಕಾರದ ನಿಷ್ಕ್ರಿಯವಾದ ಕೆಲಸ, ಸ್ಪಷ್ಟ ನಿಲುವುಗಳ ಕೊರತೆ, ಪ್ರಾಮಾಣಿಕ ಪ್ರಯತ್ನದ ಕೊರತೆ, ಸರಕಾರದಲ್ಲಿ ಇಲ್ಲದಿರುವ ಸಮನ್ವಯತೆ ಗಳಿಂದಾಗಿ ಅದರ ಜೊತೆಜೊತೆ ಎಲ್ಲಿ ನೋಡಿದಲ್ಲಿ ಭ್ರಷ್ಟಾಚಾರದ ವಾಸನೆಗಳಿಂದಾಗಿ ಜನರಿಗೆ ಆಸ್ಪತ್ರೆಯಲ್ಲಾಗಲಿ, ಕೋವಿಡ್ ಕೇಂದ್ರಗಳಲ್ಲಾಗಲಿ ಅಥವಾ ಆಂಬುಲೆನ್ಸ್ ಸೇವೆಯಲ್ಲಾಗಲಿ ಸಮರ್ಪಕ ಸೇವೆ ಇಲ್ಲದಾಗಿದೆ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News