ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ದರಾಗಲು ಅಧಿಕಾರಿಗಳಿಗೆ ಸಚಿವ ಕಾರಜೋಳ ಸೂಚನೆ

Update: 2020-07-11 04:14 GMT

ಬಾಗಲಕೋಟೆ, ಜು.11: ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣ, ಘಟಪ್ರಭ ಹಾಗೂ ಮಲಪ್ರಭ ನದಿಗಳಿಂದ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ. ಮುಂಜಾಗೃತ ಕ್ರಮವಾಗಿ ಪ್ರವಾಹ ಎದುರಿಸಲು ಅಧಿಕಾರಿಗಳು ಸನ್ನದ್ದರಾಗಬೇಕೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ಪ್ರವಾಹ ನಿಯಂತ್ರಣ ಮತ್ತು ಕೋವಿಡ್ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಿಗೆ ತೆರಳಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆಯಾ ತಾಲೂಕಿನ ತಹಶೀಲ್ದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಿಸಲು ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ತಾಲೂಕಾ ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕಾರ್ಯಪ್ರವೃತ್ತರಾಗುವಂತೆ ಸಚಿವರು ಸೂಚಿಸಿದರು.

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳಲ್ಲಿ ಯಾವುದೇ ಅನುದಾನ ಕೊರತೆ ಇರುವುದಿಲ್ಲ. ಎನ್.ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನಲ್ಲಿ 7 ಕೋಟಿ ರೂ.ಗಳ ಅನುದಾನ ಲಭ್ಯವಿದೆ. 2 ಹೊಸ ರೆಸ್ಕ್ಯೂ ಬೋಟ್‍ಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ. ತಾಲೂಕುವಾರು ನುರಿತ ಈಜುಗಾರರ ಪಟ್ಟಿ ಮಾಡಲು ಸೂಚಿಸಿದ ಸಚಿವರು, ಲೈಫ್ ಸೇವಿಂಗ್ ಜಾಕೆಟ್, ಟಾರ್ಚ್, ಹೆಲ್ಮೆಟ್ ಮುಂತಾದ ಆವಶ್ಯಕ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ, ಮನೆ ಹಾನಿ ಕುರಿತು ತಂಡ ರಚನೆ, ಮೇವು ಪೂರೈಕೆ, ಸಹಾಯವಾಣಿ ಕೇಂದ್ರ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸ್ಥಾಪಿಸಲು ಸೂಚಿಸಿದರು. ಜನರ ಆರೋಗ್ಯ, ಜಾನುವಾರು ಆರೋಗ್ಯಕ್ಕೆ ಅಗತ್ಯ ಔಷಧಿಗಳ ದಾಸ್ತಾನು, ಮೇವು ಹಾಗೂ ಮುಂತಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಮೂಲಭೂತ ಸೌಲಭ್ಯ, ಗಂಜಿ ಕೇಂದ್ರ, ಗೋಶಾಲೆ ಕುರಿತು ಕ್ರಮವಹಿಸಲು ತಿಳಿಸಿದ ಸಚಿವರು, ಜಿಲ್ಲೆಯಲ್ಲಿ ಒಟ್ಟು 27 ನಾವೆಗಳಿದ್ದು, ಈ ಪೈಕಿ 19 ಸುಸ್ಥಿತಿಯಲ್ಲಿವೆ. ಅವುಗಳನ್ನು ಸಿದ್ದತೆಯಲ್ಲಿ ಇಟ್ಟುಕೊಳ್ಳಲು ಸೂಚಿಸಿದರು.

ಜಿಲ್ಲಾಧಿಕಾರಿಗಳು ಪ್ರವಾಹ ಎದುರಿಸಲು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು.

 ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿ.ಪಂ ಸಿಇಓ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News