ವಿಕಾಸ್ ದುಬೆ ಎನ್‍ಕೌಂಟರ್: ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಒತ್ತಾಯ

Update: 2020-07-11 12:34 GMT

ಬೆಂಗಳೂರು, ಜು.11: ಉತ್ತರ ಪ್ರದೇಶದಲ್ಲಿ ರೌಡಿ ವಿಕಾಸ್ ದುಬೆಯನ್ನು ಎನ್‍ಕೌಂಟರ್ ನಲ್ಲಿ ಹತ್ಯೆ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೊಲೀಸರ ಶರಣಾಗಿದ್ದ ರೌಡಿ ವಿಕಾಸ್ ದುಬೆ ಎನ್‍ಕೌಂಟರ್ ಪೂರ್ವಯೋಜಿತ ಎಂಬುದನ್ನು ಮಾಧ್ಯಮಗಳು ವರದಿ ಮಾಡಿವೆ. ಎನ್‍ಕೌಂಟರ್ ನಡೆದ ರಸ್ತೆಯಲ್ಲಿ ಪ್ರಕರಣ ನಡೆಯುವುದಕ್ಕೂ ಮೊದಲು ಸಾರ್ವಜನಿಕ ವಾಹನಗಳನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಈ ಪ್ರಕರಣವು ಪೂರ್ವ ನಿಯೋಜಿತವೆಂದು ಅನುಮಾನ ಮೂಡಿಸಿದೆ.

ವಿಕಾಸ್ ದುಬೆ ಕಳೆದ ಎರಡು ದಶಕಗಳಿಂದ ರಾಜಕೀಯ ಪಕ್ಷಗಳ ಪೋಷಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಒಂದು ವಾರದ ಹಿಂದೆ ಆತ ಎಂಟು ಮಂದಿ ಪೊಲೀಸ್ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಹತ್ಯೆಗಳ ಹಿಂದೆ ರಾಜಕೀಯ ಪಿತೂರಿಯು ಇರುವ ಸಾಧ್ಯತೆ ಇದೆ. ಆದರೆ, ಪೊಲೀಸರು ವಿಕಾಸ್ ದುಬೆಯನ್ನು ಎನ್‍ಕೌಂಟರ್ ಮಾಡುವ ಮೂಲಕ ಆತನೊಂದಿಗೆ ಸಂಬಂಧ ಹೊಂದಿದ್ದ ಹಲವರನ್ನು ರಕ್ಷಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲೆ ದೃಢ ನಂಬಿಕೆ ಇರುವವರು ಕಾನೂನು ಸುವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳೊಂದಿಗೆ ಅಪವಿತ್ರ ಸಂಬಂಧ ಹೊಂದಿದ್ದ ಅಪರಾಧಿಯನ್ನು ಕಾನೂನು ಬಾಹಿರವಾಗಿ ಹತ್ಯೆ ಮಾಡಿರುವುದರ ಹಿಂದೆ ಹಲವರ ಕೈವಾಡ ಇದೆ. ಹೀಗಾಗಿ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ಆದೇಶಿಸಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News