ಗುಜರಾತ್, ಉ.ಪ್ರ ಮಾದರಿಯಲ್ಲೇ ರಾಜ್ಯದಲ್ಲಿಯೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಸಚಿವ ಪ್ರಭು ಚೌಹಾಣ್

Update: 2020-07-11 12:38 GMT

ಬೆಂಗಳೂರು, ಜು. 11: ಗುಜರಾತ್, ಉತ್ತರ ಪ್ರದೇಶ ಮಾದರಿಯಲ್ಲೆ ರಾಜ್ಯದಲ್ಲಿಯೂ 'ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2010' ಅನ್ನು ಜಾರಿಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆಯನ್ನು ದೇಶದಲ್ಲಿ ಹಲವು ರಾಜ್ಯಗಳು ಅನುಷ್ಠಾನಕ್ಕೆ ತಂದಿದ್ದು, ಕರ್ನಾಟಕದಲ್ಲಿಯೂ ಸಮರ್ಪಕ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜಸ್ಥಾನ, ಆಂಧ್ರ ಮತ್ತು ತೆಲಂಗಾಣ, ಅಸ್ಸಾಂ, ಬಿಹಾರ, ಚಂಡೀಗಡ, ಛತ್ತೀಸಗಡ, ದಿಲ್ಲಿ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂದರು.

ಅಧ್ಯಯನಕ್ಕೆ ತಂಡ ರವಾನೆ: ಕೋವಿಡ್-19 ಸೋಂಕು ಇಳಿಮುಖವಾದ ನಂತರ ತಜ್ಞರ ತಂಡವನ್ನು ರಚನೆ ಮಾಡಿ ಅಗತ್ಯವಿದ್ದಲ್ಲಿ ಉತ್ತರ ಪ್ರದೇಶ ಹಾಗೂ ಗುಜರಾತ್‍ಗೆ ಭೇಟಿ ನೀಡಿ ಆ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ರೀತಿಯ ಅಧ್ಯಯನಕ್ಕೆ ಸಿಎಂ ಜೊತೆ ಚರ್ಚಿಸಿ ಕರ್ನಾಟಕದಲ್ಲಿ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ಬೇರೆ ರಾಜ್ಯಗಳಿಗಿಂತ ಹೆಚ್ಚು ಬಲಪಡಿಸಲು ಬದ್ಧ ಎಂದು ಅವರು ಪ್ರಕಟಿಸಿದರು.

2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ-1964 ಬದಲಾಗಿ, `ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2010'ನ್ನು ಅಂದಿನ ಸರಕಾರದ ಅವಧಿಯಲ್ಲಿ ವಿಧಾನ ಮಂಡಲದಲ್ಲಿ ಮಂಡನೆ ಆಗಿದೆ. ಕೇಂದ್ರ ಗೃಹ ಇಲಾಖೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ, ತಿದ್ದುಪಡಿಗೆ ಸೂಚನೆ ನೀಡಿತ್ತು. ಆದರೆ, ಆ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಗೋಹತ್ಯ ನಿಷೇಧ ಕಾಯ್ದೆ-1964 ಅನ್ನು ಮುಂದುವರಿಸಿತು ಎಂದು ವಿವರಿಸಿದರು.

ಜಾನುವಾರುಗಳ ವಧೆಗೆ ನಿಷೇಧ: ನೂತನ ಕಾಯ್ದೆ ಅನುಷ್ಠಾನಕ್ಕೆ ಬಂದರೆ ರಾಜ್ಯದಲ್ಲಿ ಜಾನುವಾರುಗಳ ವಧೆಗೆ ನಿಷೇಧ ಬೀಳಲಿದೆ, ಗೋಮಾಂಸ ಮಾರಾಟ ಹಾಗೂ ಬಳಕೆ ನಿಷೇಧವಾಗಲಿದೆ. ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರಗಳ ಅಕ್ರಮ ಸಾಗಣೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ, ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ. ಬೇರೆ ರಾಜ್ಯಗಳಲ್ಲಿ ಅನುಷ್ಠಾನವಾಗಿರುವ ಕಾಯ್ದೆಯನ್ನು ಅವಲೋಕಿಸಿ ಗೋಮಾತೆಯ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.

ಮಂಡಳಿಯ ಸ್ಥಾಪನೆ: ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮವಹಿಸಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ 85.22 ಲಕ್ಷ ದನ, 29.98 ಲಕ್ಷ ಎಮ್ಮೆ, 110.91 ಲಕ್ಷ ಕುರಿ, 61.96 ಲಕ್ಷ ಮೇಕೆ, 3.26 ಲಕ್ಷ ಹಂದಿ ಮತ್ತು 617 ಲಕ್ಷ ಕೋಳಿಗಳಿವೆ. ಈ ಎಲ್ಲ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ 4214 ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ವಾರ್ ರೂಮ್: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಲಾಖೆಯಿಂದ ವಾರ್ ರೂಮ್ ಸ್ಥಾಪಿಸಲು ತಯಾರಿ ನಡೆಸಲಾಗುತ್ತಿದೆ. ಸೌಲಭ್ಯ ದಿನದ 24 ಗಂಟೆ ಲಭ್ಯವಾಗಲಿದೆ. ಟೋಲ್ ಫ್ರಿ ನಂಬರ್ ವ್ಯವಸ್ಥೆ ಇರುತ್ತದೆ. ಕರೆ ಮಾಡಿದ 4 ಗಂಟೆಯಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಕರೆ ಮಾಡಿದ ಮೊಬೈಲ್ ನಂಬರ್ ಗೆ ಎಸ್‍ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುವುದು. ರೈತರಿಗೆ, ಪಶುಪಾಲಕರಿಗೆ, ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತ ಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News