ಸಚಿವ ಸಿ.ಟಿ.ರವಿಗೆ ಕೊರೋನ ಸೋಂಕು ದೃಢ

Update: 2020-07-11 14:13 GMT

ಚಿಕ್ಕಮಗಳೂರು, ಜು.11: ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿಗೆ ಕೊರೋನ ಪಾಸಿಟಿವ್ ಇರುವುದು ಶನಿವಾರ ಶನಿವಾರ ದೃಢಪಟ್ಟಿದ್ದು, ಸಿ.ಟಿ.ರವಿ ಸೇರಿದಂತೆ ಶನಿವಾರ ಜಿಲ್ಲೆಯಲ್ಲಿ ಮೂವರಲ್ಲಿ ಕೊರೋನ ಪಾಸಿಟಿವ್ ಇರುವುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಜಿಲ್ಲೆಯನ್ನು ಕೊರೋನ ಮಹಾಮಾರಿ ಬೆಂಬಿಡದೇ ಕಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರಿಗೂ ಕೊರೋನ ಸೋಂಕು ತಗಲಿರುವುದು ಜಿಲ್ಲೆಯ ಜನರಿಗೆ ಶಾಕ್ ನೀಡಿದೆ. ಜಿಲ್ಲೆಯಲ್ಲಿ ಶುಕ್ರವಾರ ಯಾರಲ್ಲೂ ಸೋಂಕು ಕಂಡು ಬಂದಿರಲಿಲ್ಲ. ಶನಿವಾರ ಸಿ.ಟಿ.ರವಿ ಸೇರಿದಂತೆ ಮೂವರಲ್ಲಿ ಕಾಣಿಸಿಕೊಂಡಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಕೆಲ ಬಿಜೆಪಿ ಮುಖಂಡರಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಶನಿವಾರ ವರದಿಯಾಗಿರುವ ಮೂರು ಪ್ರಕರಣಗಳಲ್ಲಿ ಎರಡು ಪ್ರಕರಣ ಚಿಕ್ಕಮಗಳೂರು ನಗರಕ್ಕೆ ಸೇರಿದ್ದು, ಒಂದು ಪ್ರಕರಣ ಕಡೂರು ತಾಲೂಕಿಗೆ ಸೇರಿದ್ದಾಗಿದೆ.

ಜಿಲ್ಲೆಯ ಮೂಡಿಗೆರೆಯ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್‍ರಿಗೆ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ವರದಿಯಾಗಿತ್ತು. ಶಾಸಕ ಪ್ರಾಣೇಶ್ ಬೆನ್ನಲ್ಲೆ ಬಿಜೆಪಿ ಹಿರಿಯ ಮುಖಂಡ, ಜಿಪಂ ಉಪಾಧ್ಯಕ್ಷರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಂತರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ ಹಾಗೂ ಅವರ ಪತ್ನಿ, ಬಿಜೆಪಿ ನಗರದ ಘಟಕದ ಅಧ್ಯಕ್ಷ ಮಧುರಾಜ್ ಅರಸ್ ಮತ್ತು ಪತ್ನಿ ಸೇರಿದಂತೆ ಸಾಲು ಸಾಲು ಬಿಜೆಪಿ ಮುಖಂಡರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರೂ ನಗರದ ಕೊರೋನ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದೀಗ ಸಚಿವ ಸಿ.ಟಿ.ರವಿ ಅವರಲ್ಲೂ ಪಾಸಿಟಿವ್ ಇರುವುದು ಶನಿವಾರದ ವರದಿಯಾಗಿದೆ.

ವಿಪ ಸದಸ್ಯ ಪ್ರಾಣೇಶ್‍ರಿಗೆ ಪಾಸಿಟಿವ್ ವರದಿಯಾದ ಬಳಿಕ ಸಿ.ಟಿ.ರವಿ ಅವರು ಬೆಂಗಳೂರಿನಲ್ಲಿ ಸ್ವಾಬ್ ಪರೀಕ್ಷೆ ಮಾಡಿಸಿದ್ದು, ಅಲ್ಲಿ ನೆಗೆಟಿವ್ ಬಂದಿತ್ತು. ಗುರುವಾರ ರಾತ್ರಿ ಅವರು ಚಿಕ್ಕಮಗಳೂರು ನಗರಕ್ಕೆ ಹಿಂದಿರುಗಿದ್ದು, ಮುನ್ನೆಚ್ಚರಿಕೆಯಾಗಿ ಚಿಕ್ಕಮಗಳೂರು ನಗರದಲ್ಲೂ ಅವರ ಸ್ವಾಬ್ ಪರೀಕ್ಷೆ ಮಾಡಿಸಿದ್ದರು. ಶನಿವಾರ ಸಿ.ಟಿ.ರವಿ ಅವರ ಪ್ರಯೋಗಾಲಯದ ವರದಿ ಜಿಲ್ಲಾಡಳಿತಕ್ಕೆ ಸಿಕ್ಕಿದ್ದು, ಅವರಿಗೆ ಪಾಸಿಟಿವ್ ಇರುವುದು ವರದಿಯಲ್ಲಿ ದೃಢಪಟ್ಟಿದೆ. 
ಶನಿವಾರ ಚಿಕ್ಕಮಗಳೂರು ನಗರದಲ್ಲಿ ವರದಿಯಾಗಿರುವ ಮತ್ತೊಂದು ಪ್ರಕರಣ ಚಿಕ್ಕಮಗಳೂರು ನಗರಕ್ಕೆ ಸೇರಿದ್ದು, ನಗರದ ಮಾರ್ಕೆಟ್ ರಸ್ತೆಯಲ್ಲಿನ ಬಡಾವಣೆ ನಿವಾಸಿಯೊಬ್ಬರಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ. ಇನ್ನು ಕಡೂರಿನ ಪ್ರಕರಣ ತಾಲೂಕಿನ ಮತ್ತಘಟ್ಟದಲ್ಲಿ ವರದಿಯಾಗಿದೆ.

ಸೋಂಕಿತರನ್ನು ನಗರದ ಕೋವಿಡ್-19 ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ವರದಿಯಾಗಿರುವ ಮೂರು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 63ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News