ಸಿಎಂ ಬಿಎಸ್‍ವೈ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಕುಮಾರಸ್ವಾಮಿ

Update: 2020-07-11 15:13 GMT

ಬೆಂಗಳೂರು, ಜು. 11: ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಲ ಆಪ್ತ ಸಿಬ್ಬಂದಿ, ಅವರ ವಾಹನ ಚಾಲಕರೊಬ್ಬರಿಗೆ ಕೊರೋನ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ಯಡಿಯೂರಪ್ಪನವರಿಗೆ, ದೂರವಾಣಿ ಕರೆ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು.

ಶನಿವಾರ ಮಧ್ಯಾಹ್ನ ಕರೆ ಮಾಡಿದ ಕುಮಾರಸ್ವಾಮಿ, ಆಪ್ತ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನಚ್ಚರಿಕೆ, ಅಗತ್ಯ ಜಾಗೃತಿ ವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಇದೇ ಸಂದರ್ಭದಲ್ಲಿ ಯಡಿಯೂರಪ್ಪನವರು, ಕುಮಾರಸ್ವಾಮಿಯವರಿಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಸಲಹೆ ಮಾಡಿದ್ದಾರೆ. ಉಭಯ ನಾಯಕರು `ರಾಜಕೀಯ ಕಾರಣ'ಕ್ಕೆ ಸದಾ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುತ್ತಿದ್ದರು. ಆದರೆ, ಇಂದು ಅದನ್ನಲ್ಲ ಮರೆತು ಪರಸ್ಪರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

ಅಧಿಕೃತ ಕಾರ್ಯಕ್ರಮಗಳ ರದ್ದು: ಸಿಎಂ ಹೋಂ ಕ್ವಾರಂಟೈನ್ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಸಿಎಂ ಬಿಎಸ್‍ವೈ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮಾರಕ ಕೊರೋನ ಸೋಂಕು ನಿಯಂತ್ರಣ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ದೂರವಾಣಿ ಮೂಲಕವೇ ಸಲಹೆ-ಸೂಚನೆಗಳನ್ನು ನೀಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News