ಕೇವಲ ಶೇ. 1ರಷ್ಟು ಒಬಿಸಿ ಜಾತಿಗಳಿಗೆ ಮಾತ್ರ ಮೀಸಲಾತಿಯ ಶೇ 50ರಷ್ಟು ಲಾಭ: ಸರಕಾರದ ಸಮಿತಿಯ ವರದಿ

Update: 2020-07-11 15:30 GMT

ಹೊಸದಿಲ್ಲಿ, ಜೂ.11: ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದ 5-6 ಸಾವಿರ ಜಾತಿ/ಸಮುದಾಯಗಳ ಪೈಕಿ ಕೇವಲ 40 ಜಾತಿಗಳು ಮಾತ್ರವೇ, ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಾತಿ ಹಾಗೂ ಕೇಂದ್ರೀಯ ಸೇವೆಗಳಲ್ಲಿ ನೇಮಕಾತಿಗಾಗಿನ ಮೀಸಲಾತಿಗಳ ಶೇ.50ರಷ್ಟನ್ನು ಬಾಚಿಕೊಂಡಿವೆಯೆಂದು ಸರಕಾರವು ರಚಿಸಿರುವ ಸಮಿತಿಯೊಂದರ ವರದಿ ತಿಳಿಸಿದೆ.

ಅಂದರೆ ಒಟ್ಟು ಒಬಿಸಿ ಸಮುದಾಯದ ಶೇ.1ರಷ್ಟು ಜಾತಿಗಳು ಮಾತ್ರವೇ ಮೀಸಲಾತಿಯ ಪ್ರಯೋಜನವನ್ನು ಪಡೆಯುವಲ್ಲಿ ಸಫಲವಾಗಿವೆ ಎಂಬುದು ಈ ಅಂಕಿ-ಅಂಶಗಳಿಂದ ತಿಳಿದು ಬಂದಿರುವುದಾಗಿ ವರದಿಯು ಹೇಳಿದೆಯೆಂದು theprint.in ಸುದ್ದಿ ಜಾಲತಾಣ ವರದಿ ಮಾಡಿದೆ.

ಒಬಿಸಿ ಸಮುದಾಯಗಳ ಉಪವರ್ಗೀಕರಣಕ್ಕಾಗಿ ಕೇಂದ್ರ ಸರಕಾರವು 2017ರ ಅಕ್ಟೋಬರ್ ನಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಶೇ.20ರಷ್ಟು ಒಬಿಸಿ ಜಾತಿಗಳು 2014 ಹಾಗೂ 2018ರ ನಡುವೆ ಯಾವುದೇ ಮೀಸಲಾತಿ ಸೌಲಭ್ಯವನ್ನು ಪಡೆಯಲು ವಿಫಲವಾಗಿವೆ.

ಕೇಂದ್ರೀಯ ಮಟ್ಟದಲ್ಲಿ ಮೀಸಲಾತಿಯ ಪ್ರಯೋಜನಗಳ ಹಂಚಿಕೆಯ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಈ ಸಮಿತಿಯ ರಚನೆಯಾಗಿತ್ತು.

ದಿಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ನೇತೃತ್ವದ ಈ ಆಯೋಗವು ಸತತ 9ನೇ ಬಾರಿಗೆ ಆರು ತಿಂಗಳ ಅವಧಿಗೆ ವಿಸ್ತರಣೆಗೊಂಡಿದೆ.

ಕೇಂದ್ರ ಸರಕಾರದ ಉದ್ಯೋಗಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಒಬಪಿಸಿ ಸಮುದಾಯಗಳು ಶೇ.27ರಷ್ಟು ಮೀಸಲಾತಿಗೆ ಅರ್ಹತೆಯನ್ನು ಹೊಂದಿವೆ.

ಮೀಸಲಾತಿಯ ಸೌಲಭ್ಯಗಳ ಉತ್ತಮ ಹಂಚಿಕೆಯನ್ನು ಖಾತರಿಪಡಿಸಲು ಸಾವಿರಾರು ಜಾತಿ, ಸಮುದಾಯಗಳನ್ನು ಒಳಗೊಂಡ ಒಬಿಸಿಯನ್ನು ಉಪವರ್ಗೀಕರಿಸುವ ಅಗತ್ಯವಿದೆಯೆಂದು ಸಮಾಜದ ಹಲವು ಮುಖಂಡರ ದೀರ್ಘ ಕಾಲದ ಬೇಡಿಕೆಯಾಗಿದೆ.

ಒಬಿಸಿ ಮೀಸಲಾತಿಯ ಪ್ರಯೋಜನವನ್ನು ಈತನಕ ಪಡೆದಿರದ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಡೆದಿರುವ ಸಮುದಾಯಗಳಿಗೆ, ಉದ್ಯೋಗ, ನೇಮಕಾತಿಗಳಲ್ಲಿ ಪ್ರತ್ಯೇಕವಾದ ಅವಕಾಶ ನೀಡಬೇಕು ಎಂದು ಆಯೋಗವು ಪ್ರಸ್ತಾವಿಸಿರುವುದಾಗಿ ಸಮಿತಿಯ ಸದಸ್ಯರಲ್ಲೊಬ್ಬರಾದ ಜೆ.ಕೆ.ಬಜಾಜ್ ತಿಳಿಸಿದ್ದಾರೆ.

ಬಿಹಾರ ಚುನಾವಣೆ ಮೇಲೆ ಕಣ್ಣು: ಸಮಿತಿಯ ಅವಧಿ ವಿಸ್ತರಣೆ

ನವೆಂಬರ್ ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒಬಿಸಿಗಳ ಉಪವರ್ಗೀಕರಣದ ಬೇಡಿಕೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಬಿಹಾರದಲ್ಲಿ ಜಾತಿ ರಾಜಕೀಯವು, ಆ ರಾಜ್ಯದ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೊಂದು ಚುನಾವಣಾ ವಿಷಯವಾಗುವುದನ್ನು ತಪ್ಪಿಸಲು ಬಿಜೆಪಿಯು ಸಮಿತಿಗೆ ಕಾಲಮಿತಿಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News