ದೇಶದ ಅರ್ಥಿಕತೆ ನಿಧಾನವಾಗಿ ಸಹಜತೆಗೆ ಮರಳುತ್ತಿದೆ: ಶಕ್ತಿಕಾಂತ್

Update: 2020-07-11 15:35 GMT

 ಹೊಸದಿಲ್ಲಿ,ಜು.11: ಕೋವಿಡ್-19 ಲಾಕ್ ಡೌನ್ ಹಂತಹಂತವಾಗಿ ಸಡಿಲಗೊಳ್ಳುತ್ತಿರುವಂತೆಯೇ, ಭಾರತೀಯ ಆರ್ಥಿಕತೆಯು ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಸಂಕೇತಗಳು ದೊರೆಯುತ್ತಿವೆ ಎಂದು ಆರ್ ನಿಐ ಗವರ್ನರ್ ಶಕ್ತಿಕಾಂತ್ ದಾಸ್ ಶನಿವಾರ ತಿಳಿಸಿದ್ದಾರೆ.

 ವಿತ್ತೀಯ ವಲಯಗಳು ಶಾಸನಾತ್ಮಕ ವಿನಾಯಿತಿಗಳನ್ನು ಅವಲಂಭಿಸದೆ ಸಹಜವಾಗಿ ಕಾರ್ಯನಿರ್ವಹಿಸಬೇಕಾಗಿದೆಯೆಂದು ಅವರು ಹೇಳಿದ್ದಾರೆ.

 ಶನಿವಾರ ನಡೆದ 7ನೇ ಎಸ್ ಬಿಐ ಬ್ಯಾಂಕಿಂಗ್ ಹಾಗೂ ಆರ್ಥಿಕತೆ ಚಿಂತನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಲಾಕ್ ಡೌನ್ ನಿರ್ಬಂಧಗಳ ಸಡಿಲುಗೊಳ್ಳುವಿಕೆಯ ಬಳಿಕ ಭಾರತೀಯ ಆರ್ಥಿಕತೆಯು ಸಹಜತೆಯತ್ತ ಮರಳುತ್ತಿರುವ ಲಕ್ಷಣಗಳನ್ನು ಪ್ರದರ್ಶಿಸತೊಡಗಿವೆ ಎಂದರು.

 ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ನ ಬಹುಆಯಾಮದ ನೀತಿಗಳು, ಕೋವಿಡ್-19 ಲಾಕ್ ಡೌನ್ ನಿಂದಾದ ತಕ್ಷಣದ ದುಷ್ಪರಿಣಾಮದಿಂದ ರಕ್ಷಣೆಯನ್ನು ಒದಗಿಸುವಲ್ಲಿ ಸಫಲವಾಗಿವೆ ಎಂದರು. ಆದರೆ ಮಧ್ಯಮ ಅವಧಿಯ ಆರ್ಥಿಕ ಮುನ್ನೋಟವು ಇನ್ನೂ ಅನಿಶ್ಚಿತವಾಗಿದ್ದು, ಅದು ಕೋವಿಡ್-19 ಹರಡುವಿಕೆಯನ್ನು ಅವಲಂಭಿಸಿದೆ ಎಂದರು.

ಆಯಾ ಪರಿಸ್ಥಿತಿಯಲ್ಲಿ ಎದುರಾಗುವ ಸವಾಲುಗಳಿಗೆ ಸ್ಪಂದಿಸುವಲ್ಲಿ ದೇಶದ ಬ್ಯಾಂಕಿಂಗ್ ಹಾಗೂ ಆರ್ಥಿಕ ವ್ಯವಸ್ಥೆ ಸಮರ್ಥವಾಗಿದೆ ಎಂದವರು ಸ್ಪಷ್ಟಪಡಿಸಿದರು.

ಬದಲಾಗುತ್ತಿರುವ ಸಮಯಗಳಲ್ಲಿ ಬ್ಯಾಂಕ್ ಗಳು ತಮ್ಮ ಆಡಳಿತವನ್ನು ಸುಧಾರಣೆಗೊಳಿಸಲು ಹಾಗೂ ರಿಸ್ಕ್ ನಿರ್ವಹಣೆಯನ್ನು ಚುರುಕುಗೊಳಿಸಬೇಕಾಗಿದೆ ಎಂದು ಶಕ್ತಿಕಾಂತ್ ದಾಸ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News