ಪ್ರತಿಭೆ ಆಧಾರಿತ ವಲಸೆ ವ್ಯವಸ್ಥೆಗಾಗಿ ಶೀಘ್ರ ಆದೇಶ: ಶ್ವೇತಭವನ

Update: 2020-07-11 16:38 GMT

ವಾಶಿಂಗ್ಟನ್, ಜು. 11: ಪ್ರತಿಭೆ ಆಧಾರಿತ ವಲಸೆ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಉದ್ದೇಶದ ಸರಕಾರಿ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧಪಡಿಸುತ್ತಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

‘ನಾನು ವಲಸೆ ಸಂಬಂಧಿ ಸರಕಾರಿ ಆದೇಶವೊಂದನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂಬುದಾಗಿ ಟೆಲಿಮಂಡೊ ನ್ಯೂಸ್ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ ಸ್ವಲ್ಪವೇ ಹೊತ್ತಿನ ಬಳಿಕ ಶ್ವೇತಭವನವು ಈ ಸಂಬಂಧ ಹೇಳಿಕೆಯೊಂದನ್ನು ಹೊರಡಿಸಿದೆ.

“ನಾನು ಈಗ ಸಿದ್ಧಪಡಿಸುತ್ತಿರುವ ಸರಕಾರಿ ಆದೇಶದಲ್ಲಿ, ಮಕ್ಕಳಾಗಿದ್ದಾಗ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದಿರುವವರಿಗೆ ಅಮೆರಿಕದ ಪೌರತ್ವ ಪಡೆಯುವ ಅವಕಾಶಗಳಿವೆ” ಎಂದು ಟ್ರಂಪ್ ಹೇಳಿದ್ದಾರೆ.

“ಮಕ್ಕಳಾಗಿದ್ದಾಗ ಅಕ್ರಮವಾಗಿ ಅಮೆರಿಕಕ್ಕೆ ಬಂದಿರುವವರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ನನ್ನ ಆದೇಶವು, ವಲಸೆ ಕುರಿತ ಬೃಹತ್ ಮಸೂದೆಯೊಂದರ ಭಾಗವಾಗಲಿದೆ. ಅದು ಅತ್ಯುತ್ತಮ ಮಸೂದೆಯಾಗಲಿದೆ ಹಾಗೂ ಪ್ರತಿಭೆ ಆಧಾರಿತ ಮಸೂದೆಯಾಗಲಿದೆ. ಇದರಿಂದ ಜನರಿಗೆ ಸಂತೋಷವಾಗುತ್ತದೆ ಎಂದು ನಾನು ಭಾವಿಸಿದ್ದೇನೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News