ಗೆಳೆಯ ರೋಜರ್ ಸ್ಟೋನ್ ರ ಜೈಲು ಶಿಕ್ಷೆ ರದ್ದುಪಡಿಸಿದ ಟ್ರಂಪ್

Update: 2020-07-11 16:40 GMT

ವಾಶಿಂಗ್ಟನ್, ಜು. 11: ತನ್ನ ದೀರ್ಘಕಾಲೀನ ಗೆಳೆಯ ರೋಜರ್ ಸ್ಟೋನ್ ರ 40 ತಿಂಗಳ ಸೆರವಾಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮನ್ನಾ ಮಾಡಿದ್ದಾರೆ.

“ರೋಜರ್ ಸ್ಟೋನ್ ಈಗ ಸ್ವತಂತ್ರರಾಗಿದ್ದಾರೆ” ಎಂದು ಶ್ವೇತಭವನವು ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ. ಸ್ಟೋನ್ ಇನ್ನು ಕೆಲವೇ ತಿಂಗಳಲ್ಲಿ ತನ್ನ ಜೈಲು ಶಿಕ್ಷೆಯನ್ನು ಅನುಭವಿಸಲು ಫೆಡರಲ್ ಕಾರಾಗೃಹವೊಂದಕ್ಕೆ ಹೋಗುವವರಿದ್ದರು.

ಇದರ ಬೆನ್ನಿಗೇ, ಟ್ರಂಪ್ ತನ್ನ ಸ್ನೇಹಿತರಿಗೆ ಸಹಾಯ ಮಾಡಲು ಹಾಗೂ ಟೀಕಾಕಾರರು ಮತ್ತು ಶತ್ರುಗಳೆಂಬಂತೆ ಕಂಡುಬಂದವರನ್ನು ಶಿಕ್ಷಿಸಲು ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಹೊಸ ಆರೋಪಗಳು ಎದ್ದಿವೆ.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ರ ವಿಜಯಕ್ಕಾಗಿ ಅವರ ಪ್ರಚಾರ ತಂಡವು ರಶ್ಯದೊಂದಿಗೆ ಕೈಜೋಡಿಸಿತ್ತು ಎಂಬ ಆರೋಪದ ಬಗ್ಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಡೆಸಿದ ತನಿಖೆಗೆ ಅಡ್ಡಿಪಡಿಸಿದ್ದಾರೆ, ಸಂಸತ್ತು ಕಾಂಗ್ರೆಸ್ ಗೆ ಸುಳ್ಳು ಹೇಳಿದ್ದಾರೆ ಹಾಗೂ ಸಾಕ್ಷಿಯೊಂದನ್ನು ನಾಶಪಡಿಸಿದ್ದಾರೆ ಎಂಬ ಆರೋಪವನ್ನು ಆಡಳಿತಾರೂಢ ರಿಪಬ್ಲಿಕನ್ ಪಕ್ಷದವರೇ ಆದ ಸ್ಟೋನ್ ವಿರುದ್ಧ ಹೊರಿಸಲಾಗಿತ್ತು. ಅವರ ವಿರುದ್ಧದ ಆರೋಪಗಳು ಕಳೆದ ವರ್ಷದ ನವೆಂಬರ್ ನಲ್ಲಿ ಸಾಬೀತಾದವು.

ಇದಕ್ಕೆ ಸಂಬಂಧಿಸಿದ ತನಿಖೆಯನ್ನು ವಿಶೇಷ ವಕೀಲ ರಾಬರ್ಟ್ ಮುಲ್ಲರ್ ನಡೆಸಿದ್ದರು. ಸಂಭವಿಸದೇ ಇರುವ ಅಪರಾಧದ ಬಗ್ಗೆ ಮುಲ್ಲರ್ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ಟ್ರಂಪ್ ಪದೇ ಪದೇ ಹೇಳಿದ್ದರು.

ಈ ಪ್ರಕರಣದಲ್ಲಿ ಟ್ರಂಪ್ ಆಡಳಿತವು ಇದಕ್ಕೂ ಮೊದಲೊಮ್ಮೆ ಹಸ್ತಕ್ಷೇಪ ನಡೆಸಿತ್ತು. ಸ್ಟೋನ್ ಗೆ 7ರಿಂದ 9 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂಬುದಾಗಿ ಪ್ರಾಸಿಕ್ಯೂಟರ್ ಗಳು ಶಿಫಾರಸು ಮಾಡಿದಾಗ, ಮಧ್ಯಪ್ರವೇಶಿಸಿದ ಅಟಾರ್ನಿ ಜನರಲ್ ಬಿಲ್ ಬರ್ ಅದು ಅತಿಯಾಯಿತೆಂದು ಹೇಳಿದರು.

ಆಗ ಈ ಪ್ರಕರಣವನ್ನು ನಿಭಾಯಿಸುತ್ತಿದ್ದ ಎಲ್ಲ ನಾಲ್ವರು ಪ್ರಾಸಿಕ್ಯೂಟರ್ ಹೊರಬಂದರು. ಹೊಸದಾಗಿ ಬಂದ ಪ್ರಾಸಿಕ್ಯೂಟರ್ ಸ್ಟೋನ್ ಗೆ 3ರಿಂದ 4 ವರ್ಷಗಳ ಶಿಕ್ಷೆಯನ್ನು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News