ಜೈಲಿನಲ್ಲಿ ಹದಗೆಡುತ್ತಿರುವ ವರವರ ರಾವ್ ಆರೋಗ್ಯ ಸ್ಥಿತಿ: ಕುಟುಂಬದ ಆರೋಪ

Update: 2020-07-12 12:05 GMT

ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದ ಸಂಬಂಧ ಜೈಲಿನಲ್ಲಿರುವ ತೆಲುಗು ಕವಿ ವರವರರಾವ್‍ ಅವರ ದೇಹಸ್ಥಿತಿ ವಿಷಮಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬದವರು ಆಪಾದಿಸಿದ್ದಾರೆ. 81 ವರ್ಷದ ವರವರ ರಾವ್ 2018ರ ಆಗಸ್ಟ್ 31ರಿಂದ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.

ಕಳೆದ ವಾರ ವರವರ ರಾವ್ ಪ್ರಜ್ಞಾಶೂನ್ಯರಾದ ಹಿನ್ನೆಲೆಯಲ್ಲಿ ಅವರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ 14 ಮಂದಿ ಸಂಸದರು ಮಹಾರಾಷ್ಟ್ರ ಸಿಎಂ ಉದ್ಧವ್‍ ಠಾಕ್ರೆಯವರಿಗೆ ಪತ್ರ ಬರೆದು, ತುರ್ತು ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.  ಜೈಲಿನಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

ಶನಿವಾರ ರಾವ್‍ ಅವರಿಂದ ದೂರವಾಣಿ ಕರೆ ಬಂದಿದ್ದು, ಒಂದೂವರೆ ನಿಮಿಷದ ಸಂಭಾಷಣೆ ವೇಳೆ ಅವರಿಗೆ ನಿರರ್ಗಳವಾಗಿ ಮಾತನಾಡಲು ಕೂಡಾ ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗಿದೆ. ತಮ್ಮದೈನಂದಿನ ಕೆಲಸ ಕಾರ್ಯಗಳಿಗೆ ಬೇರೆಯವರನ್ನು ಅವಲಂಬಿಸಬೇಕಾದ ಸ್ಥಿತಿ ಇದೆ ಎಂದು ಸಹ ಕೈದಿಗಳು ಹೇಳಿದ್ದಾಗಿ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ.

50 ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನಡೆದ ಘಟನೆಯಂತೆ ವಿವರಿಸುತ್ತಿದ್ದಾರೆ. ಬಹುಶಃ ಇದು ನರಸಂಬಂಧಿ ಕಾಯಿಲೆ ಸೂಚನೆ ಎಂದು ರಾವ್‍ ಅವರ ಪುತ್ರಿ ಪಾವನ ಹೇಳಿದ್ದಾರೆ.  

ಜೆಜೆ ಆಸ್ಪತ್ರೆಗೆ ಅವರನ್ನು ದಾಖಲಿಸಿದಾಗ ಅವರಿಗೆ ಆಥ್ರೋಪಿ ಸಮಸ್ಯೆ ಇದೆ ಎನ್ನುವುದು ವೈದ್ಯಕೀಯ ದಾಖಲೆಗಳಿಂದ ತಿಳಿದಿದೆ. ಸೂಕ್ತ  ವೈದ್ಯಕೀಯ ಕಾಳಜಿ ನೀಡದಿದ್ದರೆ ಅವರ ಜೀವಕೋಶಗಳಿಗೆ ಹಾನಿಯಾಗಿ ದೇಹಸ್ಥಿತಿ ಮತ್ತಷ್ಟು ವಿಷಮಿಸುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರು ಹೇಳಿದ್ದಾಗಿ ಅವರು ವಿವರಿಸಿದ್ದಾರೆ. ಅವರಿಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News