ಹೆಚ್ಚುತ್ತಿರುವ ಕೊರೋನ: ಆಸ್ಪತ್ರೆಗಳಲ್ಲಿ ಪೊಲೀಸರಿಗೆ ಪ್ರತ್ಯೇಕ ಚಿಕಿತ್ಸೆಗೆ ಗೃಹ ಸಚಿವ ಬೊಮ್ಮಾಯಿ ಸೂಚನೆ

Update: 2020-07-12 13:06 GMT

ಬೆಂಗಳೂರು, ಜು. 12: ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಲ್ಲಿಯೂ ಸೋಂಕು ಹೆಚ್ಚಾಗುತ್ತಿರುವ ಕಾರಣ ಪೊಲೀಸರ ಕಾರ್ಯ-ವಿಧಾನದಲ್ಲಿ ಕೆಲ ಬದಲಾವಣೆ ತರುವುದು ಅನಿವಾರ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ರವಿವಾರ ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಕೆಲಸದ ಜೊತೆಗೆ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಸ ನಿಯಂತ್ರಣವು ಅಷ್ಟೇ ಮಹತ್ವದ್ದು. ಆ ಕರ್ತವ್ಯದಲ್ಲೂ ಸಾರ್ವಜನಿಕರ ಹಾಗೂ ಅಪರಾಧಿಗಳ ಸಂಪರ್ಕ ಹೆಚ್ಚಾಗಿರುತ್ತದೆ. ಹೀಗಾಗಿ ಪೊಲೀಸ್ ಠಾಣೆಗಳಲ್ಲಿ ಕೋವಿಡ್-19 ಹರಡುವ ಸ್ಥಳವಾಗಿರುವುದರಿಂದ ಅವಶ್ಯಕತೆಯಿರುವ ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲು ಸೂಚನೆ ನೀಡಿದ್ದಾರೆ.

ಕೊರೋನ ಸೋಂಕಿತ ಸಿಬ್ಬಂದಿಗೆ ಕೂಡಲೇ ಆರೋಗ್ಯ ಭಾಗ್ಯ ಯೋಜನೆಯಡಿ ಹಣವನ್ನು ಎಲ್ಲ ನಿಯೋಜಿತ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿ, ಎಲ್ಲ ಆಸ್ಪತ್ರೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಮಾಡುವುದು. ಪ್ರತಿಯೊಬ್ಬ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಶಿಫ್ಟ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಸೂಚಿಸುವುದು. ಸಾರ್ವಜನಿಕರ ದೂರುಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಿ ದಾಖಲಾದ ದೂರುಗಳನ್ನು ವಿಚಾರಣೆ ಮಾಡುವುದು.

50 ರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸುವುದು, ಕರ್ತವ್ಯ ಮುಗಿದ ನಂತರ ಸಿಬ್ಬಂದಿ ಹಾಗೂ ಠಾಣೆಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡುವುದು. ಅದಕ್ಕಾಗಿ ಬೇಕಾಗುವ ಹಣಕಾಸಿನ ನೆರವು ನೀಡುವುದು. ಪೊಲೀಸ್ ಠಾಣೆಗಳಲ್ಲಿ ಸ್ವಾಗತಕಾರ ಸ್ಥಳಗಳಲ್ಲಿ ಗಾಜಿನ ಕ್ಯಾಬಿನೆಟ್‍ಗಳನ್ನು ಆಳವಡಿಸಿ ದೂರು ಸ್ವೀಕರಿಸುವುದು. ಕೋವಿಡ್ ಆಸ್ಪತ್ರೆ ಹಾಗೂ ಸ್ಮಶಾನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್, ಹೆಡ್‍ಗ್ಲೆರ್, ಗ್ಲೌಸ್ ಹಾಗೂ ಪಿಪಿಇ ಕಿಟ್‍ಗಳನ್ನು ನೀಡುವುದು. ಪೊಲೀಸ್ ಸಿಬ್ಬಂದಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಆಯುಷ್/ ಆಯುರ್ವೇದಿಕ್ ಔಷಧಿಗಳನ್ನು ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News