'ಸಂಡೇ ಲಾಕ್​ಡೌನ್'ಗೆ ಸ್ತಬ್ಧವಾದ ಕರ್ನಾಟಕ: ರಸ್ತೆಗಳು ಖಾಲಿ ಖಾಲಿ, ಮನೆಗಳಲ್ಲೇ ಉಳಿದ ಜನತೆ

Update: 2020-07-12 13:33 GMT

ಬೆಂಗಳೂರು, ಜು. 12: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಿದ್ದ ರವಿವಾರದ ಲಾಕ್‍ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಇಡೀ ರಾಜ್ಯವೇ ಅಕ್ಷರಶಃ ಸ್ತಬ್ಧವಾಗಿತ್ತು.

ಆಸ್ಪತ್ರೆ, ಆಂಬ್ಯುಲೆನ್ಸ್, ಹಾಲು, ಔಷಧಿ, ದಿನಸಿ, ಹಣ್ಣು-ತರಕಾರಿ, ಮಾಂಸದ ಅಂಗಡಿಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ ಸೇರಿ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್‍ನ ಎರಡು ಬಸ್ ನಿಲ್ದಾಣಗಳು, ಪ್ರಮುಖ ವೃತ್ತಗಳು ಸೇರಿದಂತೆ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಬೆಂಗಳೂರು ನಗರದಲ್ಲಿ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆ ಮಿತಿ ಮೀರಿದೆ. ಇದರಿಂದ ತೀವ್ರ ಆತಂಕಗೊಂಡಿರುವ ಜನತೆ ಹೊರ ಬರದೆ ತಮ್ಮ ತಮ್ಮ ಮನೆಗಳಲ್ಲೇ ಉಳಿದರು. ಹೀಗಾಗಿ ಹೆದ್ದಾರಿಗಳು, ಹೊರ ವರ್ತುಲ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳು ಯಾವುದೇ ವಾಹನ ಸಂಚಾರವಿಲ್ಲದೆ ಸಂಪೂರ್ಣ ಖಾಲಿಯಾಗಿದ್ದವು. ಅಲ್ಲಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದರು. ಮೇಲ್ಸೇತುವೆಗಳು ಸೇರಿ ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.

ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ರವಿವಾರದ ಲಾಕ್‍ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಸೋಂಕಿನ ಭೀತಿಯಿಂದ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದಿದ್ದರು. ಹೀಗಾಗಿ ಇಡೀ ರಾಜ್ಯವೇ ಒಂದು ರೀತಿಯಲ್ಲಿ ಮೌನಕ್ಕೆ ಶರಣಾದಂತಿತ್ತು.

ಲಾಕ್‍ಡೌನ್ ವಿಸ್ತರಣೆ ಬಗ್ಗೆ ನಾಳೆ ಚರ್ಚೆ ಸಾಧ್ಯತೆ

ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರ ರಾತ್ರಿ 8ಗಂಟೆಯಿಂದ ಜು.22ರ ಬೆಳಗ್ಗೆ 5 ಗಂಟೆಯ ವರೆಗೆ ಒಂದು ವಾರ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಅದೇ ಮಾದರಿಯಲ್ಲೇ ರಾಜ್ಯದಲ್ಲಿ `ಲಾಕ್‍ಡೌನ್' ಘೋಷಿಸುವ ಸಂಬಂಧ ಸಿಎಂ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿರುವ ಜಿಲ್ಲಾಧಿಕಾರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಚರ್ಚಿಸುವ ಸಾಧ್ಯತೆಗಳಿವೆ.

ಆಪ್ತ ಹಾಗೂ ಕಾರು ಚಾಲಕರೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರುವ ಸಿಎಂ ಬಿಎಸ್‍ವೈ, ಬೆಂಗಳೂರು ನಗರ, ಗ್ರಾಮಾಂತರ, ಕಲಬುರಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ರಾಯಚೂರು ಮತ್ತು ಗದಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಕೊರೋನ ಸೋಂಕು ನಿಯಂತ್ರಣ, ಮಳೆ ಪರಿಸ್ಥಿತಿ ಹಾಗೂ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ರವಿವಾರದ ಲಾಕ್‍ಡೌನ್ ಮತ್ತು ಸ್ವ-ಕ್ವಾರಂಟೈನ್‍ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆ ಕಳೆಯುತ್ತಿದ್ದೇನೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News