ಕೊರೋನ ಪರೀಕ್ಷಾ ವರದಿ ವಿಳಂಬ ತಪ್ಪಿಸಲು ಕ್ರಮ ವಹಿಸಿ: ಕುಮಾರಸ್ವಾಮಿ

Update: 2020-07-12 13:41 GMT

ಬೆಂಗಳೂರು, ಜು. 12: ಕೊರೋನ ವೈರಸ್ ಸೋಂಕಿನ ಶಂಕಿತರ ಪರೀಕ್ಷಾ ವರದಿ ವಿಳಂಬದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯ ಸರಕಾರ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ವಿಳಂಬವಿಲ್ಲದೆ ಅಂದಿನ ಪರೀಕ್ಷಾ ವರದಿಯನ್ನು ಅಂದೇ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ.

ರವಿವಾರ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಾಕಿರುವ ಅವರು, ಸೋಂಕು ನಿಯಂತ್ರಣ ದೃಷ್ಟಿಯಿಂದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಒಂದು ಭಾಗ. ಸೋಂಕಿನ ಪತ್ತೆಗೆ ಗಂಟಲು ದ್ರವ ಸಂಗ್ರಹಿಸಿ ಒಂದು ವಾರ, ಹತ್ತು ದಿನಗಳು ಕಳೆದರೂ ಪರೀಕ್ಷಾ ವರದಿ ನೀಡದ ಹಿನ್ನೆಲೆಯಲ್ಲಿ ಸೋಂಕು ಹಬ್ಬುತ್ತಿದೆ. ಆದುದರಿಂದ ಅಂದಿನ ಪರೀಕ್ಷಾ ವರದಿಯನ್ನು ಅಂದೇ ನೀಡುವ ವ್ಯವಸ್ಥೆ ತರಬೇಕು ಎಂದು ಆಗ್ರಹಿಸಿದರು.

ಈಗಾಗಲೇ ರಾಜ್ಯ ಸರಕಾರ ಕೊರೋನ ಸೋಂಕಿನ ಶಂಕಿತರ ಪರೀಕ್ಷೆಗೆ 1 ಲಕ್ಷ ಕಿಟ್ ತರಿಸಲಾಗಿದೆ ಎಂದು ಹೇಳಿದೆ. ಇದು ಒಳ್ಳೆಯದು. ಆದರೆ, ಕೂಡಲೇ ಪರೀಕ್ಷಾ ವರದಿ ನೀಡದಿದ್ದರೆ ಸೋಂಕಿತರು ಮನಸೋಇಚ್ಛೆ ಸಂಚರಿಸುವುದರಿಂದ ಸೋಂಕು ವ್ಯಾಪಕವಾಗುತ್ತಿದೆ. ಹೀಗಾಗಿ ರಾಜ್ಯ ಸರಕಾರ ಸೂಕ್ತ ಮುನ್ನಚ್ಚರಿಕೆ ವಹಿಸಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಕೊರೋನ ಸೋಂಕಿನ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಕೂಡಲೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸೋಂಕು ಮತ್ತೊಬ್ಬರಿಗೆ ಹಬ್ಬುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಆಲೋಚಿಸಿ ಕ್ರಮ ವಹಿಸಬೇಕು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News