ಟರ್ಕಿ ಗಡಿದಾಟು ಮೂಲಕ ಸಿರಿಯಕ್ಕೆ ನೆರವು ಸಾಮಗ್ರಿ ವಿತರಣೆಗೆ ಭದ್ರತಾ ಮಂಡಳಿ ಅಂಗೀಕಾರ

Update: 2020-07-12 15:31 GMT

ನ್ಯೂಯಾರ್ಕ್, ಜು. 12: ಟರ್ಕಿಯ ಗಡಿದಾಟೊಂದರ ಮೂಲಕ ಸಿರಿಯಕ್ಕೆ ನೆರವು ಸಾಮಗ್ರಿಗಳನ್ನು ವಿತರಿಸುವ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶನಿವಾರ ಅಂಗೀಕಾರ ನೀಡಿದೆ. ಸಿರಿಯದಲ್ಲಿ ಆರು ವರ್ಷಗಳ ಮಾನವೀಯ ಕಾರ್ಯಾಚರಣೆಗೆ ನೀಡಿರುವ ಅನುಮೋದನೆಯು ಮುಕ್ತಾಯಗೊಂಡ ಒಂದು ದಿನದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ.

ಟರ್ಕಿಯ ಮೂಲಕ ವಿತರಿಸಲಾಗುವ ನೆರವು ಸಿರಿಯದ ವಾಯುವ್ಯ ಭಾಗದಲ್ಲಿ ವಾಸಿಸುತ್ತಿರುವ ಸಿರಿಯನ್ನರಿಗೆ ವರದಾನವಾಗಿದೆ ಎಂದು ವಿಶ್ವಸಂಸ್ಥೆಯು ಹೇಳಿದೆ.

ಈ ವಿಷಯದಲ್ಲಿ 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಬಿಕ್ಕಟ್ಟು ಏರ್ಪಟ್ಟಿತ್ತು. ಹೆಚ್ಚಿನ ಸದಸ್ಯರು ಸಿರಿಯದ ಮಿತ್ರ ದೇಶಗಳಾದ ರಶ್ಯ ಮತ್ತು ಚೀನಾಗಳಿಗೆ ವಿರುದ್ಧವಾಗಿದ್ದರು. ಶನಿವಾರ ನಡೆದ ಭದ್ರತಾ ಮಂಡಳಿಯ ಐದನೇ ಮತದಾನಕ್ಕೆ ಚೀನಾ ಮತ್ತು ರಶ್ಯ ಗೈರುಹಾಜರಾಗಿದ್ದವು.

ಮಾನವೀಯ ನೆರವು ಕಾರ್ಯಾಚರಣೆಗೆ ಬಳಸುವ ಟರ್ಕಿ ಗಡಿದಾಟುಗಳ ಸಂಖ್ಯೆಯನ್ನು ಎರಡರಿಂದ ಒಂದಕ್ಕೆ ಇಳಿಸಬೇಕೆಂದು ವೀಟೊ ಅಧಿಕಾರ ಹೊಂದಿರುವ ರಶ್ಯ ಮತ್ತು ಚೀನಾಗಳು ಪಟ್ಟು ಹಿಡಿದಿದ್ದವು. ಸಿರಿಯದ ವಾಯುವ್ಯ ಭಾಗಕ್ಕೆ ಸಿರಿಯದಿಂದಲೇ ಹೋಗಬಹುದು ಎಂಬುದಾಗಿ ಅವುಗಳು ವಾದಿಸಿದ್ದವು. ಒಂದು ನಿರ್ದಿಷ್ಟ ನಿರ್ಣಯವೊಂದನ್ನೂ ಭದ್ರತಾ ಮಂಡಳಿ ಅಂಗೀಕರಿಸಬೇಕೆಂದು ಚೀನಾ ಮತ್ತು ರಶ್ಯ ಒತ್ತಾಯಿಸಿದ್ದವು. ಆದರೆ, ಈ ನಿರ್ಣಯವು ಸಿರಿಯದಲ್ಲಿನ ಮಾನವೀಯ ಬಿಕ್ಕಟ್ಟಿಗಾಗಿ ಆ ದೇಶದ ವಿರುದ್ಧ ವಿಧಿಸಲಾಗಿರುವ ಏಕಪಕ್ಷೀಯ ದಿಗ್ಬಂಧನಗಳನ್ನು ಟೀಕಿಸುತ್ತವೆ ಎಂಬುದಾಗಿ ಪಾಶ್ಚಿಮಾತ್ಯ ರಾಜತಾಂತ್ರಿಕರು ಹೇಳುತ್ತಾರೆ.

ನೆರವು ಸಾಮಗ್ರಿ ವಿತರಣೆ ಪರವಾನಿಗೆಯನ್ನು ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ವಿಸ್ತರಿಸಬೇಕೇ ಎಂಬ ಬಗ್ಗೆಯೂ ಭದ್ರತಾ ಮಂಡಳಿಯ ಸದಸ್ಯ ದೇಶಗಳಲ್ಲಿ ಭಿನ್ನಮತ ಏರ್ಪಟ್ಟಿತ್ತು. ಬಳಿಕ, ಶನಿವಾರ ಒಂದೇ ಗಡಿದಾಟುವನ್ನು ಒಂದು ವರ್ಷದ ಅವಧಿಗೆ ಬಳಸುವ ಕಿರು ನಿರ್ಣಯವನ್ನು ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News