ಗುಣಮುಖರಾದ ಕೊರೋನ ಸೋಂಕಿತರಿಗೆ ಮರು ಸೋಂಕು ತಗಲುವುದು ತೀರಾ ವಿರಳ: ತಜ್ಞರ ಅಭಿಪ್ರಾಯ

Update: 2020-07-12 17:21 GMT

ಬೆಂಗಳೂರು, ಜು.12: ಕೊರೋನ ಸೋಂಕು ತಗುಲಿದ ನಂತರ ಗುಣಮುಖರಾಗುವವರಿಗೆ ಮರು ಸೋಂಕು ತಗುಲುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ವಿರಳವಾದದ್ದಾಗಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ.

ಒಂದು ಬಾರಿ ಸೋಂಕಿತರು ಗುಣಮುಖರಾದ ಬಳಿಕ ಆರು ತಿಂಗಳಲ್ಲಿ ಮತ್ತೊಂದು ಬಾರಿ ಸೋಂಕು ತಗಲುವ ಸಾಧ್ಯತೆ ಬಹಳಷ್ಟು ಕಡಿಮೆಯಿರುತ್ತದೆ. ಸೋಂಕಿಗೊಳಗಾದ ವ್ಯಕ್ತಿಯೊಳಗೆ ರೋಗ ನಿರೋಧಕ ಶಕ್ತಿಯಿದ್ದರೆ ಮತ್ತೆ ಸೋಂಕು ಸಮೀಪಿಸುವುದಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಕೊರೋನ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲ ಆಂಟಿಜೆನ್ ಪರೀಕ್ಷೆಯನ್ನು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದನ್ನು ದೃಢಪಡಿಸಲು ಆಂಟಿಬಾಡಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಶೇ 100ರಷ್ಟು ಅದು ಕೊರೋನ ಖಚಿತ ಎನ್ನಬಹುದು. ರೋಗಲಕ್ಷಣವಿದ್ದೂ ಸೋಂಕು ಇಲ್ಲ ಎಂಬ ವರದಿ ಬಂದಿದ್ದರೆ ಬೇರೆ ಪರೀಕ್ಷೆ ನಡೆಸಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಸೋಂಕಿನ ಲಕ್ಷಣ ಇಲ್ಲದವರನ್ನಷ್ಟೇ ಅಲ್ಲದೆ, ಸೋಂಕು ಲಕ್ಷಣ ಹೊಂದಿದವರಿಗೆ, ಆರೋಗ್ಯ ಸೇವಾ ಕಾರ್ಯಕರ್ತರಿಗೆ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್ ಔಷಧಿ ಸೇವಿಸುವವರಿಗೆ, 60 ವರ್ಷ ಮೇಲ್ಪಟ್ಟವರಿಗೆ, ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶದ ತೊಂದರೆ ಸೇರಿ ಬೇರೆ ಯಾವುದೇ ಕಾಯಿಲೆ ಹೊಂದಿದವರಿಗೂ ಈ ಆಂಟಿಜೆನ್ ಪರೀಕ್ಷೆ ನಡೆಸಬಹುದು’ ಎಂದು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News