ಲಾಕ್‍ಡೌನ್ ನಿರ್ಧಾರ ಸ್ವಾಗತಾರ್ಹ: ತಜ್ಞರ ಅಭಿಪ್ರಾಯ

Update: 2020-07-12 18:31 GMT

ಬೆಂಗಳೂರು, ಜು.12: ನಗರದಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿರುವ ಸರಕಾರದ ನಿರ್ಧಾರ ಸ್ವಾಗತಾರ್ಹ ಬೆಳವಣಿಗೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಒಂದೇ ದಿನದಲ್ಲಿ ರಾಜ್ಯಾದ್ಯಂತ ಮೂರು ಸಾವಿರದ ಸನ್ನಿಹದಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಅಲ್ಲದೆ, 70 ಜನರು ಮರಣ ಹೊಂದಿದ್ದು, ಈ ಸಂಖ್ಯೆ ರಾಜ್ಯದಲ್ಲಿ ದಾಖಲೆಯಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೆ, ಮೃತಪಡುತ್ತಿರುವವರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ.

ಇಂತಹ ಸಂದಿಗ್ನ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಬಿಟ್ಟರೆ, ಅನ್ಯಮಾರ್ಗವಿರಲಿಲ್ಲ. ಆದರೆ ರಾಜ್ಯದಲ್ಲೂ ಸೋಂಕಿನ ಪ್ರಕರಣಗಳು ಮತ್ತು ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅನಗತ್ಯ ಸಮಯದಲ್ಲಿ ದೇಶವನ್ನು ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಬೆಂಗಳೂರು ಮತ್ತು ರಾಜ್ಯದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಲಾಕ್‍ಡೌನ್ ತೆರವು ಮಾಡುವುದು ಸರಿಯಲ್ಲ. ವಾಣಿಜ್ಯ ವಹಿವಾಟಿಗಿಂತಲೂ ಜನರ ಆರೋಗ್ಯ ಮುಖ್ಯ ಎಂದು ಒತ್ತಾಯಿಸಿದ್ದರು.

ಹೀಗಿದ್ದರೂ, ಸರಕಾರ ಲಾಕ್‍ಡೌನ್ ಮಾಡುವ ನಿರ್ಧಾರಕ್ಕೆ ಮುಂದಾಗಲಿಲ್ಲ. ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ, ಮಂಗಳವಾರದಿಂದ ಒಂದು ವಾರ ಲಾಕ್‍ಡೌನ್ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ನಿಲುವಾಗಿದೆ ಎಂದು ಹಲವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News