ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆ ಅನಿರ್ಧಿಷ್ಟಾವದಿ ಬಂದ್ ಗೆ ಅಡಿಕೆ ವರ್ತಕರ ನಿರ್ಧಾರ

Update: 2020-07-13 12:15 GMT

ಶಿವಮೊಗ್ಗ, ಜು.13: ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸುಗ್ರಿವಾಜ್ಞೆಗೆ ಅಸಮಾಧಾನ ವ್ಯಕ್ತಪಡಿಸಿ ಶಿವಮೊಗ್ಗ ಅಡಿಕೆ ವರ್ತಕರ ಸಂಘ ಜು.13ರಿಂದ ಎಪಿಎಂಸಿ ಪ್ರಾಂಗಣದಲ್ಲಿ ಅಡಿಕೆ ಸೇರಿದಂತೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮಾರಾಟವನ್ನು ಅನಿರ್ಧಿಷ್ಟಾವಧಿವರೆಗೆ ನಿಲ್ಲಿಸಲಾಗಿದೆ ಎಂದು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸುಗ್ರಿವಾಜ್ಞೆ ಹೊರಡಿಸಿದೆ. ಇದರ ಪ್ರಕಾರ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಮ್ಮ ಇಚ್ಚೆಯಂತೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಆದರೆ ಎಪಿಎಂಸಿ ಆವರಣದ ಹೊರಗೆ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಯಾವುದೇ ಮಾರುಕಟ್ಟೆ ಶುಲ್ಕ ಪಾವತಿಸುವಂತಿಲ್ಲ. ಎಪಿಎಂಸಿ ಒಳಗೆ ನಡೆಯುವ ವ್ಯಾಪಾರ ವಹಿವಾಟಿಗೆ ವರ್ತಕರು ಶೇ.1ರಷ್ಟು ಮಾರುಕಟ್ಟೆ ಶುಲ್ಕ (ಸೆಸ್) ಕಟ್ಟಬೇಕಾಗುತ್ತದೆ ಎಂದರು.

ಇದರಿಂದ ಎಪಿಎಂಸಿ ಒಳಗೆ ಇರುವ ವರ್ತಕರು ತಮ್ಮ ವಹಿವಾಟನ್ನೆ ನಿಲ್ಲಿಸಿಬಿಡುತ್ತಾರೆ. ಯಾವ ಟೆಂಡರ್ ಪ್ರಕ್ರಿಯೆಗಳು ಉಳಿಯುವುದಿಲ್ಲ. ರೈತರಿಗೂ ಕೂಡ ಸರಿಯಾದ ಬೆಲೆ ಸಿಕ್ಕದೇ ಹೋಗಬಹುದು. ಒಟ್ಟಾರೆ ಇಡೀ ಎಪಿಎಂಸಿ ವ್ಯವಸ್ಥೆಯೇ ಹದಗೆಡುತ್ತದೆ. ಎಪಿಎಂಸಿಯೇ ಮುಚ್ಚಿಹೋಗುವ ಅಪಾಯವಿದೆ ಎಂದು ವಿಷಾಧಿಸಿದರು.

ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಅಥವಾ ಎಪಿಎಂಸಿ ಒಳಗೆ ಅಥವಾ ಹೊರಗೆ ಎಲ್ಲೇ ವ್ಯಾಪಾರವಾಗಲೀ ಏಕರೂಪ ಶುಲ್ಕ ವಿಧಿಸಬೇಕು. ಹೊರಗಡೆಯೂ ಶೇ.1ರಷ್ಟು ಮಾರುಕಟ್ಟೆ ಶುಲ್ಕ ಪಾವತಿಸಿದರೆ ಎಪಿಎಂಸಿಯ ಒಳಗೆ ವ್ಯಾಪಾರವಾಗುತ್ತದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಕೃಷಿ ಉತ್ಪನ್ನಗಳು ಮಾರಾಟವಾಗದೇ ಎಪಿಎಂಸಿಯೇ ಶಾಶ್ವತವಾಗಿ ಮುಚ್ಚಿಹೋಗುತ್ತದೆ ಎಂದರು.

ಈ ಎಲ್ಲ ಕಾರಣಗಳಿಂದ ಶಿವಮೊಗ್ಗದಲ್ಲಿ ಜು.13ರಿಂದಲೇ  ಎಲ್ಲ ರೀತಿಯ ವ್ಯಾಪಾರವನ್ನು ಬಂದ್ ಮಾಡಲಾಗುತ್ತದೆ. ಹಾಗೆಯೇ ಸಾಗರ, ಚನ್ನಗಿರಿ, ಭೀಮಸಮುದ್ರ ಸೇರಿದಂತೆ ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ವ್ಯಾಪಾರ ವಹಿವಾಟನ್ನು ಬಂದ್ ಮಾಡಿ ಪ್ರತಿರೋಧ ವ್ಯಕ್ತಪಡಿಸಲಾಗುತ್ತದೆ ಎಂದರು.

ಶಿವಮೊಗ್ಗದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ವರ್ತಕರಿದ್ದಾರೆ. ವರ್ಷಕ್ಕೆ 2 ಸಾವಿರ ಕೋಟಿ ವ್ಯವಹಾರವಾಗುತ್ತದೆ. ಸುಮಾರು 35 ಕೋಟಿ ರೂ.ಗಳ ತೆರಿಗೆ ಸಲ್ಲಿಸಲಾಗುತ್ತಿದೆ. ಇದೆಲ್ಲವೂ ನಿಂತಂತಾಗಿ ಸರ್ಕಾರಕ್ಕೆ ನಷ್ಟವಾಗುತ್ತದೆ. ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಪ್ರಕಾರ ಒಂದು ಲೋಡ್ ಅಡಿಕೆಗೆ ಎಪಿಎಂಸಿ ಒಳಗೆ ವ್ಯಾಪಾರ ಮಾಡುವ ವರ್ತಕರು 1 ಲಕ್ಷ  ರೂ. ಮಾರುಕಟ್ಟೆ ಶುಲ್ಕ ಪಾವತಿಸಬೇಕಾಗುತ್ತದೆ. ಅದೇ ಎಪಿಎಂಸಿ ಹೊರಗೆ ಮಾರಿದರೆ ಏನೂ ಕಟ್ಟುವ ಹಾಗಿಲ್ಲ. ಇದು ಅಸಂಬದ್ದವಾಗಿದೆ. ಅಲ್ಲದೆ ಹೊರಗೆ ಖರೀದಿಸಿದ ವರ್ತಕರು ಮತ್ತು ರೈತರು ನಿರ್ಧಿಷ್ಟವಾಗಿ ಅಡಿಕೆ ವ್ಯಾಪಾರವನ್ನು ತಿಳಿಸುವುದಿಲ್ಲ. ಕಡಿಮೆ ಬಿಲ್ಲಿಂಗ್ ಮಾಡುತ್ತಾರೆ. ಇದರಿಂದ ಜಿಎಸ್‌ಟಿ ಕೂಡ ಕಡಿಮೆಯಾಗಿ ಸರ್ಕಾರಕ್ಕೆ ನಷ್ಟವಾಗುತ್ತದೆಯೇ ಹೊರತು ಯಾವುದೇ ಲಾಭವಿಲ್ಲ ಎಂದರು.

ಈ ಎಲ್ಲ ಕಾರಣಗಳಿಂದ ಏಕರೂಪ ಶುಲ್ಕ ವಿಧಿಸುವವರೆಗೂ ನಾವು ವ್ಯಾಪಾರ ನಿಲ್ಲಿಸುತ್ತೇವೆ. ರೈತರಿಗೆ ಉತ್ತಮ ಧಾರಣೆ ಸಿಗಬೇಕು ಇದು ಟೆಂಡರ್ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ. ಟೆಂಡರ್ ಪ್ರಕ್ರಿಯೆ ಉಳಿದರೆ ಮಾರುಕಟ್ಟೆ ಉಳಿಯುತ್ತದೆ. ಮಾರುಕಟ್ಟೆ ಉಳಿದರೆ ರೈತರು, ದಳ್ಳಾಳಿಗಳು, ಕಾರ್ಮಿಕರು ಅವರ ಕುಟುಂಬಗಳು ಉಳಿಯುತ್ತವೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್ ಮಾತನಾಡಿ, ಅಡಿಕೆ ವರ್ತಕರ ಸಂಘದ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ. ಕೇಂದ್ರ ಸರ್ಕಾರ ಅಧಿಕಾರಿಗಳ ಮಾತನ್ನು ಕೇಳಿ ಈ ರೀತಿ ತೀರ್ಮಾನ ಕೈಗೊಂಡಿದೆ. ಅಧಿಕಾರಿಗಳ ಕುತಂತ್ರ ಇದು ಎಂದು ದೂರಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ್, ಸಹ ಕಾರ್ಯದರ್ಶಿ ಕೆ.ಜಿ.ಪಂಚಾಕ್ಷರಪ್ಪ, ವಿಜಯಕುಮಾರ್, ಅನುಪ್ರಸಾದ್, ಗೋಪಿನಾಥ್, ಓಂಕಾರಪ್ಪ, ತಮ್ಮಡಿಹಳ್ಳಿ ನಾಗರಾಜ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News