ಒಂದೇ ದಿನ ದೇಶದಲ್ಲಿ 30 ಸಾವಿರಕ್ಕೂ ಅಧಿಕ ಕೊರೋನ ಪ್ರಕರಣ

Update: 2020-07-15 03:50 GMT

ಹೊಸದಿಲ್ಲಿ, ಜು.15: ದೇಶದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಮೊಟ್ಟಮೊದಲ ಬಾರಿಗೆ ಒಂದೇ ದಿನ 30 ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿದೆ. ಏತನ್ಮಧ್ಯೆ ಮಂಗಳವಾರ ಸೋಂಕಿಗೆ 582 ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 24 ಸಾವಿರ ದಾಟಿದೆ.

ರವಿವಾರ 29,721 ಪ್ರಕರಣ ವರದಿಯಾದದ್ದು ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆದರೆ ಮಂಗಳವಾರ 30,142 ಪ್ರಕರಣಗಳು ದೃಢಪಟ್ಟಿವೆ. ರವಿವಾರ ಹಾಗೂ ಸೋಮವಾರ ಬ್ರೆಝಿಲ್ ದೇಶಕ್ಕಿಂತ ಅಧಿಕ ದೈನಿಕ ಪ್ರಕರಣಗಳು ಭಾರತದಲ್ಲಿ ವರದಿಯಾಗಿದ್ದು, ಅಮೆರಿಕ ನಂತರ ಎರಡನೇ ಸ್ಥಾನಕ್ಕೆ ಭಾರತ ತಲುಪಿತ್ತು. ಶುಕ್ರವಾರದ ಬಳಿಕ ಬ್ರೆಝಿಲ್‌ನಲ್ಲಿ ಪ್ರಕರಣಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಮೊದಲ ಬಾರಿಗೆ ದೇಶದಲ್ಲಿ 10 ರಾಜ್ಯಗಳಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರಕರಣಗಳು ಮಂಗಳವಾರ ವರದಿಯಾಗಿವೆ. ತಮಿಳುನಾಡು (4,526), ಬಿಹಾರ (1432), ಗುಜರಾತ್ (915), ಮಧ್ಯಪ್ರದೇಶ (798), ಹರ್ಯಾಣ (699), ಕೇರಳ (608) ಮತ್ತು ಗೋವಾ (170) ರಾಜ್ಯಗಳಲ್ಲಿ ದಿನದ ಗರಿಷ್ಠ ಪ್ರಕರಣಗಳು ಮಂಗಳವಾರ ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ 213 ಮಂದಿ ಒಂದೇ ದಿನ ಸೋಂಕಿಗೆ ಬಲಿಯಾಗಿದ್ದು, ಕರ್ನಾಟಕ (87), ತಮಿಳುನಾಡು (67), ಆಂಧ್ರ ಪ್ರದೇಶ (43), ದಿಲ್ಲಿ (35) ಹಾಗೂ ಉತ್ತರ ಪ್ರದೇಶ (28) ನಂತರದ ಸ್ಥಾನಗಳಲ್ಲಿವೆ.

ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಮಂಗಳವಾರ ಹೊಸ ಪ್ರಕರಣಗಳು ವರದಿಯಾಗಿದ್ದು, 21 ಜಿಲ್ಲೆಗಳಲ್ಲಿ ಸೋಂಕಿತರು ಮೃತಪಟ್ಟ ವರದಿಯಾಗಿದೆ. ಮಂಗಳವಾರ ತಮಿಳುನಾಡಿನ ಒಟ್ಟು ಸೋಂಕಿತರ ಸಂಖ್ಯೆ 1,47,324ಕ್ಕೇರಿದೆ. ಒಟ್ಟು 2,099 ಮಂದಿ ಇಲ್ಲಿ ಮೃತಪಟ್ಟಿದ್ದಾರೆ.

ಗುಜರಾತ್ ರಾಜ್ಯವನ್ನು ಹಿಂದಿಕ್ಕಿದ ಕರ್ನಾಟಕ (ಒಟ್ಟು 44,077) ಗರಿಷ್ಠ ಪ್ರಕರಣಗಳು ವರದಿಯಾದ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನಕ್ಕೇರಿದೆ. ಮಹಾರಾಷ್ಟ್ರ (2.6 ಲಕ್ಷ), ತಮಿಳುನಾಡು (1.4 ಲಕ್ಷ) ಮತ್ತು ದಿಲ್ಲಿ (1.1 ಲಕ್ಷ) ಮಾತ್ರ ಕರ್ನಾಟಕಕ್ಕಿಂತ ಅಧಿಕ ಪ್ರಕರಣಗಳನ್ನು ಕಂಡಿವೆ. 43,723 ಪ್ರಕರಣಗಳು ದೃಢಪಟ್ಟ ಗುಜರಾತ್ ಐದನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News