ಫೇಸ್‌ಬುಕ್ ನಿಮಗೆ ಅಷ್ಟು ಆಪ್ತವಾಗಿದ್ದರೆ ರಾಜೀನಾಮೆ ನೀಡಿ: ಲೆಫ್ಟಿನೆಂಟ್ ಕರ್ನಲ್‌ಗೆ ಹೈಕೋರ್ಟ್ ತರಾಟೆ

Update: 2020-07-15 04:13 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.15: ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿರುವ ಸೇನೆಯ ಆದೇಶಕ್ಕೆ ತಲೆಬಾಗಿ ಅಥವಾ ರಾಜೀನಾಮೆ ನೀಡಿ ಎಂದು ಲೆಫ್ಟಿನೆಂಟ್ ಕರ್ನಲ್ ಅವರನ್ನು ದಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಅಪರೂಪದ ಪ್ರಸಂಗ ವರದಿಯಾಗಿದೆ.

ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿನ 89 ಆ್ಯಪ್‌ಗಳನ್ನು ತಕ್ಷಣ ಡಿಲೀಟ್ ಮಾಡುವಂತೆ ಸೇನೆ ಎಲ್ಲ ಸೈನಿಕರಿಗೆ ನಿರ್ದೇಶನ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಕಟ್ಟೆ ಏರಿದ್ದ ಅಧಿಕಾರಿಗೆ ಮುಖಭಂಗವಾಗಿದೆ. ದೇಶದ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಚಾರ ಇದಾಗಿರುವುದರಿಂದ ಸೇನೆಯ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ದಯವಿಟ್ಟು ಡಿಲೀಟ್ ಮಾಡಿ.. ನೀವು ಹೊಸದನ್ನು ಸೃಷ್ಟಿಸಬಹುದು. ನೀವು ಹೀಗೆ ಮಾಡುವಂತಿಲ್ಲ. ನೀವು ಒಂದು ಸಂಸ್ಥೆಯ ಭಾಗ. ಆದೇಶವನ್ನು ಗೌರವಿಸಿ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಎಂಡ್ಲೋ ಆಶಾ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ಪಷ್ಟವಾಗಿ ಸೂಚಿಸಿದೆ. ನೀವು ಅಷ್ಟೊಂದು ಫೇಸ್‌ಬುಕ್ ಪ್ರಿಯರಾಗಿದ್ದರೆ, ನಿಮ್ಮ ರಾಜೀನಾಮೆ ಪತ್ರವನ್ನು ನೀಡಿ. ಆಯ್ಕೆ ನಿಮ್ಮದು; ನೀವು ಏನು ಮಾಡಲು ಇಚ್ಛಿಸುತ್ತೀರಿ ಎಂದು ಕೋರ್ಟ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News