ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್‍ಡೌನ್ ವಿಧಿಸುವ ಯಾವುದೇ ಚಿಂತನೆ ಇಲ್ಲ: ಡಿಸಿ ಡಾ.ಬಗಾದಿ ಗೌತಮ್

Update: 2020-07-15 12:33 GMT

ಚಿಕ್ಕಮಗಳೂರು, ಜು.15: ಕೋವಿಡ್-19 ಸೋಂಕು ನಿಯಂತ್ರಿಸಲು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್‍ಡೌನ್ ವಿಧಿಸಲು ತೀರ್ಮಾನಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‍ಡೌನ್ ವಿಧಿಸುವ ಯಾವುದೇ ಚಿಂತನೆ ಜಿಲ್ಲಾಡಳಿತದ ಮುಂದಿಲ್ಲ. ಸೋಂಕಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಬುಧವಾರ ಈ ಸಂಬಂದ ಹೇಳಿಕೆ ನೀಡಿರುವ ಅವರು, ಸೋಂಕು ತಡೆಗಟ್ಟುವ ದೃಷ್ಟಿಯಿಂದ ಪ್ರತಿಯೊಬ್ಬ ನಾಗರೀಕರು ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಬೇಕು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರಬಾರದು ಎಂದು ಮನವಿ ಮಾಡಿದ್ದಾರೆ.

ಜು.14ರವರೆಗೆ ಜಿಲ್ಲೆಯಲ್ಲಿ 155 ಕೋವಿಡ್-19 ಸೋಂಕು ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ 93 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 65 ಮಂದಿ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದುವರೆಗೂ ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದು, ಎರಡು ಪ್ರಕರಣದಲ್ಲಿ ವ್ಯಕ್ತಿ ಮೃತಪಟ್ಟ ನಂತರ ಅವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಎರಡು ಪ್ರಕರಣದಲ್ಲಿ ಸೋಂಕು ಉಲ್ಬಣಗೊಂಡ ನಂತರ ಕೋವಿಡ್-19 ಚಿಕಿತ್ಸಾ ಘಟಕಕ್ಕೆ ಕರೆತರಲಾಗಿದೆ. ಚಿಕಿತ್ಸೆ ನೀಡಿದರೂ ಮೃತಪಟ್ಟಿದ್ದಾರೆ. ಎರಡು ಪ್ರಕರಣಗಳು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದರೂ ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದರಿಂದ ಮತ್ತು ವಯಸ್ಸು ಹೆಚ್ಚಾಗಿದ್ದರಿಂದ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

ಕೋವಿಡ್-19 ಸೋಂಕಿನ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಯಾವುದೇ ಕುಟುಂಬದಲ್ಲಿ ಅಥವಾ ವಾಸಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಸ್ಥಳೀಯರಿಗೆ ಗೊತ್ತಿರುವ ಯಾರಲ್ಲಾದರು ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಗ್ರಾಮ ಪಂಚಾಯತ್ ಕೋವಿಡ್ ಟಾಸ್ಕ್ ಫೋರ್ಸ್, ಬೂತ್‍ಮಟ್ಟದ ಟಾಸ್ಕ್ ಫೋರ್ಸ್, ವಾರ್ಡ್ ಟಾಸ್ಕ್ ಫೋರ್ಸ್ ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. 

ಕೊರೋನ ಸೋಂಕು ತಪಾಸಣೆ ನಡೆಸಲು ಜಿಲ್ಲೆಯಲ್ಲಿ 9 ಫಿವರ್ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗಿದೆ ಹಾಗೂ 12 ಸ್ವಾಬ್ ಕಲೆಕ್ಟ್ ಸೆಂಟರ್ ಗಳನ್ನು ತೆರೆಯಲಾಗಿದೆ. ದಿನಕ್ಕೆ 300 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ನಮ್ಮ ಜಿಲ್ಲೆಗೆ ಬಂದಾಗ ಅವರು ಸ್ಥಳೀಯ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್, ವಾರ್ಡ್ ಟಾಸ್ಕ್ ಫೋರ್ಸ್ ಗಮನಕ್ಕೆ ತರಬೇಕು ಎಂದು ತಿಳಿಸಿರುವ ಅವರು, ಅವರ ಮನೆಗಳಿಗೆ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ಕುಟುಂಬಸ್ಥರು, ಗಭೀರ್ಣಿಯರು, ಮಕ್ಕಳು, 60 ವರ್ಷ ಮೇಲ್ಪಟ್ಟವರು ಹಾಗೂ ಬೇರೆ ಕಾಯಿಲೆಗಳಿಂದ ಬಳಲುತ್ತಿರುವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ತಗಲಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು. 

ಸೋಂಕು ಹರಡುವುದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕೈಯಲ್ಲಿದೆ. ಪ್ರತಿಯೊಬ್ಬರು ಕೋವಿಡ್-19 ನಿರ್ಬಂಧಗಳನ್ನು ಅನುಸರಿಸಬೇಕು. ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಗಮನಕ್ಕೆ ತರುವಂತೆ ವಿನಂತಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವರಿಗೆ 100 ರೂ. ದಂಡ ವಿಧಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ ಮಾಸ್ಕ್ ಧರಿಸದೆ ತಿರುಗಾಡುವ 10 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಇದು ಸರಿಯಲ್ಲ, ಮನೆಯಿಂದ ಹೊರಬರುವಾಗ, ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಗುಂಪು ಸೇರಬಾರದು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಜಿಲ್ಲೆಗಳಿಗೆ ಅನಗತ್ಯವಾಗಿ ಪ್ರಯಾಣ ಬೆಳೆಸಬಾರದು.
-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಇದುವರೆಗೂ ಮೃತಪಟ್ಟ 7ಮಂದಿಯಲ್ಲಿ ಕೆಲವರು ಮಾಹಿತಿ ಲೋಪದಿಂದ ಹಾಗೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ. ಒಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯವರು ರೋಗಿಯಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಬೇಜಬ್ದಾರಿತನ ತೋರಿದ್ದು, ಸೋಂಕಿತರ ಬಗ್ಗೆ ಜಿಲ್ಲಾಸ್ಪತ್ರೆಗೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಇದರಿಂದ ಸಾವು ಸಂಭವಿಸಿದೆ. ಎರಡು ಪ್ರಕರಣದಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೂ ಸಹ ಸಮಯಕ್ಕೆ ಸರಿಯಾಗಿ ತಪಾಸಣೆಗೆ ಒಳಗಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 7 ಸಾವು ಸಂಭವಿಸಿದೆ.
-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News